ನವದೆಹಲಿ: ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಪ್ರಧಾನಮಂತ್ರಿ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಪೊಲೀಸರು ಬಂಧಿಸಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಹೆಳಿಕೆ ನೀಡಿರುವ ಅವರು ಶಾಂತಿಯುತ ಪ್ರತಿಭಟನಾಕಾರರ ಮೇಲಿನ ಈ ಕ್ರಮವು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇತರ ಜನಪ್ರತಿನಿಧಿಗಳನ್ನು ಪೊಲೀಸರು ತಳ್ಳಾಡಿ, ಅವರೊಂದಿಗೆ ದುರ್ವರ್ತನೆ ತೋರಿರುವ ದೃಶ್ಯಗಳು ಅತ್ಯಂತ ಆತಂಕಕಾರಿ ಮತ್ತು ಖಂಡನೀಯವಾಗಿವೆ. ಯುವಕರ ಪ್ರಶ್ನೆಗಳಿಗೆ ಮೊದಲು ಲಾಠಿ ಮತ್ತು ಅಶ್ರುವಾಯು ಮೂಲಕ ಉತ್ತರಿಸಿದ ಮೋದಿ ಸರ್ಕಾರ, ಈಗ ಅವರ ಪರವಾಗಿ ದನಿಯೆತ್ತಿದ ನಾಯಕರ ವಿರುದ್ಧವೇ ಪೊಲೀಸ್ ಬಲವನ್ನು ಬಳಸುತ್ತಿದೆ .ಇದು ಪ್ರಜಾಸತ್ತಾತ್ಮಕ ಸರ್ಕಾರದ ನಡೆಯಲ್ಲ, ಬದಲಿಗೆ ವಿದ್ಯಾರ್ಥಿಗಳಿಗೆ ಮತ್ತು ಪ್ರಶ್ನೆಗಳಿಗೆ ಹೆದರಿರುವ ಸರ್ಕಾರದ ಹೇಡಿತನದ ಪ್ರತಿಕ್ರಿಯೆಯಾಗಿದೆ.
ಪರೀಕ್ಷಾ ಅಕ್ರಮಗಳು ಹಾಗೂ ದೇಶವನ್ನು ಕಾಡುತ್ತಿರುವ ನಿರುದ್ಯೋಗದಂತಹ ಗಂಭೀರ ಸಮಸ್ಯೆಗಳ ವಿರುದ್ಧ ಮತ್ತು ಯುವಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರಾಹುಲ್ ಗಾಂಧಿ ಅವರು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಬಂಧಿಸುವುದರಿಂದ ಅಥವಾ ಅವರ ಮೇಲೆ ದೌರ್ಜನ್ಯ ಎಸಗುವುದರಿಂದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಮರೆಮಾಚಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ಮೂಲಕ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಲಾಗಿದೆ.
ಭಿನ್ನಾಭಿಪ್ರಾಯಗಳನ್ನು ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಬಳಸುವುದನ್ನು ಪ್ರಧಾನಮಂತ್ರಿಯವರು ತಕ್ಷಣವೇ ನಿಲ್ಲಿಸಬೇಕು ಹಾಗೂ ದೇಶದ ಜನತೆಗೆ ನೇರ ಉತ್ತರ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಭಾರತದ ಯುವಜನತೆಗೆ ದಮನಕಾರಿ ನೀತಿಯಲ್ಲ, ಬದಲಿಗೆ ನ್ಯಾಯ, ಹೊಣೆಗಾರಿಕೆ ಮತ್ತು ಗೌರವದ ಅಗತ್ಯವಿದೆ ಎಂಬುದನ್ನು ಕೇಂದ್ರ ಸರ್ಕಾರ ಅರಿಯಬೇಕಿದೆ.
“ನಾವು ವಿದ್ಯಾರ್ಥಿಗಳ ಜೊತೆಗೆ ಹಾಗೂ ನ್ಯಾಯಕ್ಕಾಗಿ ಧ್ವನಿ ಎತ್ತುವ ಪ್ರತಿಯೊಂದು ಪ್ರಜಾಸತ್ತಾತ್ಮಕ ಶಕ್ತಿಯೊಂದಿಗೂ ದೃಢವಾಗಿ ನಿಲ್ಲುತ್ತೇವೆ. ವಿರೋಧ ಪಕ್ಷದ ನಾಯಕರನ್ನು ಬಂಧಿಸಬಹುದು, ಆದರೆ ಸತ್ಯವನ್ನಾಗಲಿ ಅಥವಾ ಭಾರತದ ಯುವಕರ ಆಕ್ರೋಶವನ್ನಾಗಲಿ ಬಂಧಿಸಲು ಸಾಧ್ಯವಿಲ್ಲ. ಈ ಆಕ್ರೋಶವು ಜ್ವಾಲಾಮುಖಿಯಂತೆ ಹಬ್ಬಿ ನರೇಂದ್ರ ಮೋದಿಯವರ ಸುಳ್ಳಿನ ಕೋಟೆಯನ್ನು ಸುಟ್ಟು ಬೂದಿ ಮಾಡಲಿದೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.





Leave a Reply