ಯಲ್ಲಾಪುರ: ನ. 13 ರಿಂದ ಶ್ರೀ ಶಕ್ತಿಗಣಪತಿ ದೇವಸ್ಥಾನದಲ್ಲಿ 13ನೇ ವರ್ಷದ ಕಾರ್ತಿಕೋತ್ಸವ ಹಾಗೂ ಜ್ಞಾನಯಜ್ಞ

ಹಂಚಿಕೊಳ್ಳಿ

ಯಲ್ಲಾಪುರ: ಪಟ್ಟಣದ ರವೀಂದ್ರನಗರದ ಶ್ರೀ ಶಕ್ತಿಗಣಪತಿ ದೇವಸ್ಥಾನದಲ್ಲಿ, ಸ್ಪಂದನ ಯುವಕ ಸಂಘ ಹಾಗೂ ಆದರ್ಶ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ 13ನೇ ವರ್ಷದ ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದೇ ನವೆಂಬರ್ 13 ರಿಂದ 27 ರವರೆಗೆ ಒಟ್ಟು 15 ದಿನಗಳ ಕಾಲ ಈ ಉತ್ಸವ ಜರುಗಲಿದ್ದು, ದೀಪೋತ್ಸವದ ಜೊತೆಗೆ ‘ಜ್ಞಾನಯಜ್ಞ’ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ ತಿಳಿಸಿದ್ದಾರೆ.

ಬುಧವಾರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 8.30ಕ್ಕೆ ಮಹಾಪೂಜೆ ಹಾಗೂ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ ಎಂದರು.

ಉದ್ಘಾಟನಾ ಸಮಾರಂಭ:
ನವೆಂಬರ್ 13 ರಂದು ಸಾಮಾಜಿಕ ಕಾರ್ಯಕರ್ತ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರು ದೀಪೋತ್ಸವ ಹಾಗೂ ಗೀತಾಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಂಸ್ಕೃತ ವಿದ್ವಾಂಸ ಡಾ. ಮಹೇಶ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಯುವವಾಗ್ಮಿ ಹಾರಿಕಾ ಮಂಜುನಾಥ ವಿಶೇಷ ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಎಸ್.ಎಂ. ಭಟ್ಟ ಮೂಲೆಗುಂಡ್ಗಲ್ ಹಾಗೂ ಅನಂತ ಗಾಂವ್ಕರ ಉಪಸ್ಥಿತರಿರಲಿದ್ದಾರೆ.

ವಿಶೇಷ ಕಾರ್ಯಕ್ರಮಗಳು:
15 ದಿನಗಳ ಕಾಲ ಪ್ರತಿನಿತ್ಯ ಭಜನೆ, ಭಗವದ್ಗೀತಾ ಪಠಣ, ತಾಳಮದ್ದಲೆ, ಗಾನವೈಭವ ಮತ್ತು ಪಂಚವಾದ್ಯ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ‘ಯಕ್ಷಮಾಣಿಕ್ಯ’ ಚಿಂತನಾ ಹೆಗಡೆ ಮತ್ತು ವಿ. ವೆಂಕಟ್ರಮಣ ಭಟ್ಟ ಚಂದಗುಳಿ ಅವರಿಂದ ಗಾನವೈಭವ, ಭೈರುಂಬೆಯ ಶಾಲಾ ವಿದ್ಯಾರ್ಥಿಗಳಿಂದ ತಾಳಮದ್ದಲೆ ಹಾಗೂ ಖ್ಯಾತನಾಮರಾದ ಹಿರಣ್ಯ ವೆಂಕಟೇಶ ಭಟ್ಟ ಅವರಿಂದ ನಾಲ್ಕು ದಿನಗಳ ಕಾಲ ವಿಶೇಷ ಧಾರ್ಮಿಕ ಉಪನ್ಯಾಸ ಜರುಗಲಿದೆ.

ಸಮಾರೋಪ ಸಮಾರಂಭ:
ಉತ್ಸವದ ಸಮಾರೋಪ ಸಮಾರಂಭವು ಧಾರವಾಡದ ದ್ವಾರಪುರ ಮಹಾಸಂಸ್ಥಾನಾಧೀಶರಾದ ಶ್ರೀಮದ್ ಪರಮಾತ್ಮಾಜಿ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಶಾಸಕ ಎಸ್.ಎಂ. ಹೆಬ್ಬಾರ, ಗಣ್ಯರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಂ.ಎಲ್. ಹೆಗಡೆ, ಮುರಳಿ ಹೆಗಡೆ, ಜಿ.ಎಸ್. ಭಟ್ಟ ಹಳವಳ್ಳಿ ಹಾಗೂ ಜಿ.ಎನ್. ಭಟ್ಟ ತಟ್ಟಿಗದ್ದೆ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಸಿ.ಎಸ್. ಹೆಗಡೆ, ಸುಬ್ರಾಯ ಭಟ್ಟ ಹಂಡ್ರಮನೆ ಹಾಗೂ ಸುಬ್ರಹ್ಮಣ್ಯ ಗಾಂವ್ಕರ ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *