ಮುಂಡಗೋಡ ಬಾಲಕಿ ದೌರ್ಜನ್ಯ ನಡೆಸಿದ ಆರೋಪಿ ಮನೆ ಧ್ವಂಸಗೊಳಿಸಿದ ಯುವಕರ ಬೆಂಬಲಕ್ಕೆ ನಿಂತ ಬಿಜೆಪಿ: ಯುವಕರ ವಿರುದ್ಧ ಕೇಸ್ ದಾಖಲಿಸಿದರೆ ಸುಮ್ಮನಿರುವುದಿಲ್ಲ: ಹರಿಪ್ರಕಾಶ ಕೋಣೆಮನೆ ಎಚ್ಚರಿಕೆ

ಹಂಚಿಕೊಳ್ಳಿ

ನವೆಂಬರ್ 12ರ ಮುಂಡಗೋಡ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ

ಯಲ್ಲಾಪುರ: ಮುಂಡಗೋಡಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕ್ರೋಶಗೊಂಡ ಯುವಕರು ಆರೋಪಿಯ ಮನೆಯನ್ನು ಧ್ವಂಸಗೊಳಿಸಿರುವುದನ್ನು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಈ ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲು ಮುಂದಾದರೆ ಬಿಜೆಪಿ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಯಲ್ಲಾಪುರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಅತ್ಯಂತ ಖಂಡನೀಯ. ಆದರೆ, ಸಂತ್ರಸ್ತ ಬಾಲಕಿಗೆ ಎಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನೇ ಅಧಿಕಾರಿಗಳು ನೀಡುತ್ತಿಲ್ಲ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿರುವುದರಿಂದ ಬೇಸತ್ತ ಯುವಕರು ಆರೋಪಿಯ ಮನೆ ಧ್ವಂಸಗೊಳಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅವರ ಈ ಕಾರ್ಯ ಅಭಿನಂದನೀಯ” ಎಂದರು.

ಯುವಕರಿಗೆ ಸಂಪೂರ್ಣ ಬೆಂಬಲ:
“ಮನೆ ಧ್ವಂಸಗೊಳಿಸಿದ ಯುವಕರ ವಿರುದ್ಧ ಕೇಸ್ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದೆ. ಪೊಲೀಸರು ಅಂತಹ ಕ್ರಮಕ್ಕೆ ಮುಂದಾದರೆ, ಆ ಯುವಕರಿಗೆ ನೈತಿಕ, ಕಾನೂನಾತ್ಮಕ ಹಾಗೂ ಆರ್ಥಿಕ ನೆರವು ನೀಡಲು ಬಿಜೆಪಿ ಸಿದ್ಧವಿದೆ” ಎಂದು ಕೋಣೆಮನೆ ಘೋಷಿಸಿದರು. ಅಲ್ಲದೆ, ಆರೋಪಿಯ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಮನವಿ ಮಾಡಿದ ಅವರು, ನವೆಂಬರ್ 12ರಂದು ಕರೆ ನೀಡಿರುವ ‘ಮುಂಡಗೋಡ ಬಂದ್‌’ಗೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, “ಕಳೆದ ವರ್ಷ ಮದನೂರಿನಲ್ಲಿ  ನಡೆದ ಮಹಿಳಾ ದೌರ್ಜನ್ಯ, ಕಾಳಮ್ಮನಗರದಲ್ಲಿ ದಲಿತ ಯುವತಿಯ ಕೊಲೆ ಹಾಗೂ ಕಳೆದ ವಾರ ಮೂಲೆಗುಂಡ್ಕಲ್‌ನಲ್ಲಿ ದರೋಡೆ ನಡೆದಿದೆ.  ದಲಿತರ ಪರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿದೆ. ಗೃಹ ಸಚಿವರು ಆರ್‌ಎಸ್‌ಎಸ್ ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದು, ತಮ್ಮ ಜವಾಬ್ದಾರಿ ಮರೆತಿದ್ದಾರೆ” ಎಂದು ಕಿಡಿಕಾರಿದರು. ಪೊಲೀಸ್ ಇಲಾಖೆಯ ದಾಖಲೆಗಳನ್ನೇ ಉಲ್ಲೇಖಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 1,772 ಅತ್ಯಾಚಾರ, 7,047 ದೌರ್ಜನ್ಯ ಹಾಗೂ 15 ಸಾವಿರ ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಇದು ರಾಜ್ಯ ಸರ್ಕಾರದ ಅಸಮರ್ಥತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸದಸ್ಯ ಉಮೇಶ್ ಭಾಗ್ವತ್, ಜಿಲ್ಲಾ ಸಮಿತಿ ಪ್ರಮುಖರಾದ ಗಣೇಶ ಪಾಟಣಕರ್ , ಯಲ್ಲಾಪುರ ಶಕ್ತಿ ಕೇಂದ್ರದ ಪ್ರಮುಖರಾದ  ಸೋಮೇಶ್ವರ ನಾಯ್ಕ, ರವಿ ದೇವಾಡಿಗ, ವಿನೋದ ತಳೇಕರ್  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *