
ಯಲ್ಲಾಪುರ: ತಾಲೂಕಿನ ಗಡಿಗ್ರಾಮವಾದ ಅಂಕೋಲಾ ತಾಲೂಕಿನ ಹೆಬ್ಬಾರಗುಡ್ಡದ ಕೆಲವು ಜನರು ವಾಸ ಮಾಡುವ ಪ್ರದೇಶಗಳಲ್ಲಿ ಪ್ರತಿನಿತ್ಯ ಗಜಗತ್ರದ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿದ್ದು, ಸ್ಥಳಿಯರಲ್ಲಿ ತೀವ್ರ ಆತಂಕ ಎದುರಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯು ಸೂಕ್ತ ಕ್ರಮವಹಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಹೆಬ್ಬಾರಗುಡ್ಡ ಗ್ರಾಮವು ಅರಣ್ಯದಿಂದಲೇ ಕೂಡಿದ ಗುಡ್ಡಗಾಡು ಪ್ರದೇಶವಾಗಿದ್ದು, ಕಾಡು ಪ್ರಾಣಿಗಳ ಸಂಖ್ಯೆಯೂ ಈ ಪ್ರದೇಶದಲ್ಲಿ ಹೆಚ್ಚಿವೆ. ಹೆಬ್ಬಾರಗುಡ್ಡ ಗ್ರಾಮದಲ್ಲಿ ಸರಿಸುಮಾರು 2೦ ಕ್ಕೂ ಹೆಚ್ಚು ರೈತ ಕುಟುಂಬಗಳು ಜೀವನ ನಡೆಸುತ್ತಿದ್ದು, ಕಾಡು ಪ್ರಾಣಿಗಳಿಂದ ಈ ಹಿಂದೆ ತೋಟ-ಗದ್ದೆಗಳಿಗೆ ತೊಂದರೆಯಾಗಿದೆ.

ಈ ಕಾಡಿನಲ್ಲಿ ಕಾಡುಕೋಣಗಳು ಗೋಚರಿಸಿಕೊಳ್ಳುವುದು ಬಹಳ ವಿರಳವಾಗಿತ್ತು. ಆದರೆ ಸಧ್ಯ ಜನವಸತಿ ಪ್ರದೇಶಗಳಲ್ಲಿಯೇ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿದೆ. ಕೃಷಿ ಭೂಮಿ ಸೇರಿದಂತೆ ಜನರು ಸಂಚರಿಸುವ ರಸ್ತೆಯಲ್ಲಿಯೇ ಕಾಡು ಕೋಣಗಳು ಅಲೆದಾಡುತ್ತಿವೆ. ಇದರಿಂದ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಯೂ ಇದೆ. ಅಲ್ಲದೇ, ಮಹಿಳೆಯರು ಸೇರಿದಂತೆ ದಿನನಿತ್ಯ ಕೂಲಿ ಕೆಲಸಕ್ಕೆ ತೆರಳುವವರು ಭಯದ ವಾತಾವರಣದಲ್ಲಿಯೇ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕು ಹಾಗೂ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
















Leave a Reply