ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಆದೇಶ: ಚಾಲನಾ ಪರವಾನಗಿ, ವಾಹನ ದಾಖಲೆಗಳಿಗೆ ಮೊಬೈಲ್ ಸಂಖ್ಯೆ ಲಿಂಕ್ ಕಡ್ಡಾಯ

ಹಂಚಿಕೊಳ್ಳಿ

ನವದೆಹಲಿ: ಚಾಲನಾ ಪರವಾನಗಿ (DL) ಹೊಂದಿರುವವರು ಮತ್ತು ವಾಹನ ಮಾಲೀಕರು ತಮ್ಮ ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಸಾರಿಗೆ ಇಲಾಖೆಯ ಅಧಿಕೃತ ದಾಖಲೆಗಳಲ್ಲಿ ತಕ್ಷಣವೇ ನವೀಕರಿಸಿಕೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಆಧಾರ್ ದೃಢೀಕರಣದ ಮೂಲಕ ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲೇ ನವೀಕರಿಸುವ ಸುಲಭ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ.


ಕೇಂದ್ರ ಸಚಿವಾಲಯವು ಹೊರಡಿಸಿದ ಕಚೇರಿ ಜ್ಞಾಪನದ ಪ್ರಕಾರ, ಅನೇಕ ವಾಹನ ಮಾಲೀಕರು ಮತ್ತು ಚಾಲನಾ ಪರವಾನಗಿ ಹೊಂದಿರುವವರ ಹಳೆಯ ಮೊಬೈಲ್ ಸಂಖ್ಯೆಗಳು ಇಲಾಖೆಯ ದಾಖಲೆಗಳಲ್ಲೇ ಉಳಿದುಕೊಂಡಿವೆ. ಇದರಿಂದಾಗಿ ಸಾರಿಗೆ ಸೇವೆಗಳಿಗೆ ಸಂಬಂಧಿಸಿದ ಪ್ರಮುಖ ಸಂದೇಶಗಳು, ತುರ್ತು ಎಚ್ಚರಿಕೆಗಳು ಹಾಗೂ ಇಲಾಖೆಯ ಅಧಿಕೃತ ನೋಟಿಸ್‌ಗಳು ವಾಹನ ಸವಾರರಿಗೆ ತಲುಪುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ವಾಹನಗಳ ನೋಂದಣಿ ದಾಖಲೆಗಳಿರುವ ‘VAHAN’ ಮತ್ತು ಚಾಲನಾ ಪರವಾನಗಿ ದಾಖಲೆಗಳಿರುವ ‘SARATHI’ ವ್ಯವಸ್ಥೆಯಲ್ಲಿ ಹೊಸ ಮೊಬೈಲ್ ಸಂಖ್ಯೆಗಳನ್ನು ನವೀಕರಿಸಲು ಕ್ರಮ ಕೈಗೊಳ್ಳಲಾಗಿದೆ.

ಅಪ್‌ಡೇಟ್ ಮಾಡುವುದು ಹೇಗೆ?
ಸಾರ್ವಜನಿಕರು ಸಾರಿಗೆ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ಮನೆಯಲ್ಲಿಯೇ ಕುಳಿತು ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಬಹುದು.ಮೊದಲು ಪರಿವಾಹನ್ ಇಲಾಖೆಯ ಅಧಿಕೃತ ಪೋರ್ಟಲ್ parivahan.gov.in ಗೆ ಭೇಟಿ ನೀಡಬೇಕು.ಪೋರ್ಟಲ್‌ನಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು.ಚಾಲನಾ ಪರವಾನಗಿ ಸಂಬಂಧಿತ ಸೇವೆಗಳ (Driving Licence Services) ವಿಭಾಗಕ್ಕೆ ಹೋಗಿ, ‘ಮೊಬೈಲ್ ಸಂಖ್ಯೆ ನವೀಕರಣ’ (Mobile Number Update) ಆಯ್ಕೆಯನ್ನು ಆರಿಸಿಕೊಳ್ಳಬೇಕು.ಅಲ್ಲಿ ಕೇಳಲಾಗುವ ಅಗತ್ಯ ವಿವರಗಳನ್ನು ನಮೂದಿಸಿ, ಆಧಾರ್ ದೃಢೀಕರಣದ (Aadhaar Authentication) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಸುಳ್ಳು ಸುದ್ದಿಗಳನ್ನು ನಂಬಬೇಡಿ:
ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡದಿದ್ದರೆ ಚಾಲನಾ ಪರವಾನಗಿ ತಕ್ಷಣವೇ ರದ್ದಾಗುತ್ತದೆ ಅಥವಾ ಅಮಾನತುಗೊಳ್ಳುತ್ತದೆ ಎಂಬ ಗಡುವು ಹಾಗೂ ದಂಡದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಯಾವುದೇ ಅಧಿಕೃತ ಆಧಾರವಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ನಂಬದೆ, ಸಾರ್ವಜನಿಕರು ಅಧಿಕೃತ ಪ್ರಕಟಣೆಯನ್ನು ಮಾತ್ರ ಪರಿಶೀಲಿಸಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *