ಆಂಧ್ರದಲ್ಲಿ ಖೆಡ್ಡಾಕ್ಕೆ ಬಿದ್ದ ಅಂತರರಾಜ್ಯ ಸರಗಳ್ಳ: ಶಿರಸಿ ಪೊಲೀಸರ ಭರ್ಜರಿ ಕಾರ್ಯಾಚರಣೆ!

ಹಂಚಿಕೊಳ್ಳಿ


ಶಿರಸಿ: ನಗರದ ಮುಸ್ಲಿಂಗಲ್ಲಿಯ ರಸ್ತೆಯಲ್ಲಿ ಮಹಿಳೆಯೊಬ್ಬರ ಕೊರಳಿನ ಚಿನ್ನದ  ಸರ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಇರಾನಿ ಗ್ಯಾಂಗ್‌ನ  ಕಳ್ಳನನ್ನು ಶಿರಸಿ ಹೊಸಮಾರುಕಟ್ಟೆ ಠಾಣೆ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಂಟಕಲ್‌ನ ಗಂಗಾನಗರದ  ಸಮೀಪದ ಸೈಯ್ಯದ್ ಇಮ್ರಾನ್ (24) ಬಂಧಿತ ಆರೋಪಿ. ಅ.8ರಂದು ಬೆಳಗ್ಗೆ ನಗರದ ಮುಸ್ಲಿಂಗಲ್ಲಿ ರಸ್ತೆಯಲ್ಲಿ ಮಹಿಳೆಯೊಬ್ಬರು ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಕಪ್ಪು ಬಣ್ಣದ ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ವ್ಯಕ್ತಿ ಮಹಿಳೆಯ ಕೊರಳಿನಲ್ಲಿದ್ದ ಬೆಲೆಬಾಳುವ ಚಿನ್ನದ ಹವಳದ ಸರವನ್ನು ಕಿತ್ತುಕೊಂಡಿದ್ದು, ಬಳಿಕ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿರುವ ಕುರಿತು ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ತಂಡವು ಹಗಲಿರುಳು ಕಾರ್ಯಾಚರಣೆ ನಡೆಸಿ ಸಂಗ್ರಹಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಅ.15ರಂದು ಆಂಧ್ರಪ್ರದೇಶದಲ್ಲಿ ಸೈಯ್ಯದ್ ಇಮ್ರಾನ್‌ನನ್ನು ಬಂಧಿಸಿದೆ. ವಿಚಾರಣೆ ಬಳಿಕ ಸರಗಳ್ಳತನ ಕೃತ್ಯಕ್ಕೆ ಬಳಸಿದ್ದ ಟಿವಿಎಸ್ ಕಂಪನಿಯ ರೈಡರ್ ಬೈಕ್‌ನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತ ವಿವಿಧ ರಾಜ್ಯಗಳಲ್ಲಿ ಸರಗಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊಂದಿದ್ದು, ಹಲವು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿಎಸ್ಪಿಪಿ ಗೀತಾ ಪಾಟೀಲ್, ಸಿಪಿಐ ಸಂಪತ್.ಇ.ಸಿ ಮಾರ್ಗದರ್ಶನದಲ್ಲಿ ಹೊಸಮಾರುಕಟ್ಟೆ ಠಾಣೆಯ ಪಿಎಸ್‌ಐಗಳಾದ ಬಸವರಾಜ ಕನಶೆಟ್ಟಿ, ಗೀತಾ ಕಲಘಟಗಿ, ಶಿರಸಿ ನಗರ ಠಾಣೆಯ ಪಿಎಸ್ಐ ನರಸಿಂಹಲು ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಕೋಟೇಶ ನಾಗರವಳ್ಳಿ, ಸಂದೀಪ ನಿಂಬಾಯಿ, ಅರುಣ ಎಂ.ಎಲ್., ರಾಕೇಶ ಎನ್.ಎಚ್., ಬಸವರಾಜ ಹಗರಿ, ಹನುಮಂತ ಮಾಕಾಪೂರ, ರಾಮಯ್ಯ ಪೂಜಾರಿ, ಲಕ್ಷ್ಮಣ, ಪ್ರಸಾದ ಮಡಿವಾಳ, ಮಹಾದೇವ, ಶಿವಾನಂದ, ಸದ್ದಾಂ, ಪ್ರಶಾಂತ, ಚಂದ್ರಪ್ಪ, ಬಸವರಾಜ ಜಾಡರ, ಮಂಜುನಾಥ ಕಾಶಿಕೊವಿ ಹಾಗೂ ಚಾಲಕ ಮಾರುತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *