
ಶಾಸಕ ಭೀಮಣ್ಣ ನಾಯ್ಕ್ ಪ್ರಯತ್ನಕ್ಕೆ ಫಲ; 40 ಕಿ.ಮೀ. ಹೆಚ್ಚುವರಿ ಪ್ರಯಾಣ ತಪ್ಪುವ ನಿರೀಕ್ಷೆ
ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾದ ಯಾಣಕ್ಕೆ ತೆರಳುವ ಪ್ರವಾಸಿಗರು ಎದುರಿಸುತ್ತಿರುವ ರಸ್ತೆ ಸಂಪರ್ಕದ ಸಮಸ್ಯೆ ನಿವಾರಣೆಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಯಾಣ ಗ್ರಾಮದ ಕುಮಟಾ ರಸ್ತೆ ಮತ್ತು ವಡ್ಡಿ ಗ್ರಾಮದ ರಸ್ತೆಯನ್ನು ಸಂಪರ್ಕಿಸುವ 2.4 ಕಿ.ಮೀ. ಉದ್ದದ ಕೂಡುರಸ್ತೆ ಅಭಿವೃದ್ಧಿಗೆ ವಿಧಾನಸಭೆಯ ಅರ್ಜಿ ಸಮಿತಿ ಅನುಮೋದನೆ ನೀಡಲು ತೀರ್ಮಾನಿಸಿದೆ.
ಸಿರ್ಸಿ–ಕುಮಟಾ ಹೆದ್ದಾರಿಯಿಂದ ಯಾಣಕ್ಕೆ ಭೇಟಿ ನೀಡುವ ಪ್ರವಾಸಿಗರು ಸೂಕ್ತ ಸಂಪರ್ಕ ರಸ್ತೆಯ ಕೊರತೆಯಿಂದಾಗಿ ಸುಮಾರು 40 ಕಿ.ಮೀ. ಹೆಚ್ಚುವರಿ ದೂರ ಕ್ರಮಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಪ್ರಯಾಣದ ಸಮಯ ಹಾಗೂ ಇಂಧನ ವ್ಯರ್ಥವಾಗುತ್ತಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಯಾಣ ಭಾಗದ ಸ್ಥಳೀಯರು ಶಾಸಕ ಭೀಮಣ್ಣ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದ್ದರು. ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದ ಅವರು, ವಿಧಾನಸಭೆಯ ಅರ್ಜಿ ಸಮಿತಿ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ಸಂಪರ್ಕ ರಸ್ತೆ ಅಭಿವೃದ್ಧಿಯ ಅಗತ್ಯವನ್ನು ಗಮನಕ್ಕೆ ತಂದಿದ್ದರು. ಇದೀಗ ರಸ್ತೆ ಅಭಿವೃದ್ಧಿಗೆ ಸಮಿತಿ ಅನುಮೋದನೆ ನೀಡಲು ನಿರ್ಧರಿಸಿರುವುದು ಈ ಭಾಗದ ಜನರಲ್ಲಿ ನಿರೀಕ್ಷೆ ಮೂಡಿಸಿದೆ.
ಪ್ರಯಾಣದ ದೂರ ಕಡಿತ, ಪ್ರವಾಸೋದ್ಯಮಕ್ಕೆ ಬಲ
ಪ್ರಸ್ತಾವಿತ 2.4 ಕಿ.ಮೀ. ಸಂಪರ್ಕ ರಸ್ತೆ ಅಭಿವೃದ್ಧಿಗೊಂಡರೆ ಯಾಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದ್ದು, ಸುಮಾರು 40 ಕಿ.ಮೀ. ಹೆಚ್ಚುವರಿ ಪ್ರಯಾಣ ತಪ್ಪುವ ಸಾಧ್ಯತೆಯಿದೆ. ಇದರಿಂದ ಸಮಯ ಮತ್ತು ಇಂಧನ ಉಳಿತಾಯವಾಗುವುದರ ಜತೆಗೆ, ಸುತ್ತಮುತ್ತಲಿನ ಗ್ರಾಮಗಳ ರಸ್ತೆ ಸಂಪರ್ಕವೂ ಸುಧಾರಿಸಲಿದೆ.
ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದರೊಂದಿಗೆ ಯಾಣ ಪ್ರವಾಸಿ ಕ್ಷೇತ್ರಕ್ಕೆ ಭೇಟಿ ನೀಡುವವರಿಗೂ ಸುಗಮ ಪ್ರಯಾಣದ ಅವಕಾಶ ದೊರೆಯುವ ನಿರೀಕ್ಷೆಯಿದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಉತ್ತೇಜನ ಸಿಗಬಹುದು.
ಯಾಣ ಭಾಗದ ಬಹುಕಾಲದ ರಸ್ತೆ ಸಂಪರ್ಕದ ಸಮಸ್ಯೆ ಪರಿಹಾರವಾಗುವ ನಿಟ್ಟಿನಲ್ಲಿ ಶಾಸಕ ಭೀಮಣ್ಣ ನಾಯ್ಕ್ ಅವರು ಅರ್ಜಿ ಸಮಿತಿಯ ಮೂಲಕ ಪ್ರಯತ್ನಿಸಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.















Leave a Reply