ಬೀದಿಬದಿ ವ್ಯಾಪಾರಸ್ಥರ ಸಂಘಟನೆಗೆ ಚಾಲನೆ:ಯಲ್ಲಾಪುರದಲ್ಲಿ ನೂತನ ತಾಲೂಕು ಸಮಿತಿ ರಚನೆ

ಹಂಚಿಕೊಳ್ಳಿ

ಯಲ್ಲಾಪುರ: ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದಿಸುವುದು, ಸರ್ಕಾರಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು ಹಾಗೂ ವ್ಯಾಪಾರಸ್ಥರ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಪಟ್ಟಣದ ಕೋಟೆಕರಿಯವ್ವ ದೇವಸ್ಥಾನದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ದಾಂಡೇಲಿ ತಾಲೂಕು ಸಂಘಟನೆಯ ಅಧ್ಯಕ್ಷ ಸಿಲೆಮಾನ್ ಸೈವುದ್ದೀನ್ ಶೇಖ್, ಬೀದಿಬದಿ ವ್ಯಾಪಾರಸ್ಥರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದು ಹೇಳಿದರು. ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವ್ಯಾಪಾರಸ್ಥರಿಗೆ ಮಾಹಿತಿ ನೀಡುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಡಿಜಿಟಲ್ ಸಮೀಕ್ಷೆ ಮೂಲಕ ವ್ಯಾಪಾರಸ್ಥರನ್ನು ಗುರುತಿಸಿ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣಪತ್ರ ವಿತರಿಸುವ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ, ಬೀದಿಬದಿ ವ್ಯಾಪಾರಸ್ಥರ ಹಿತಾಸಕ್ತಿ ಕಾಪಾಡಲು ಮಾರಾಟ ಸಮಿತಿಯನ್ನೂ ರಚಿಸಲಾಗುತ್ತದೆ ಎಂದು ತಿಳಿಸಿದರು.

ವಕೀಲ ಗಣೇಶ ಪಾಟಣಕರ್ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ತಮ್ಮ ವ್ಯಾಪಾರದ ಭವಿಷ್ಯದ ಕುರಿತು ಅನಿಶ್ಚಿತತೆಯ ನಡುವೆ ಬದುಕುವ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಪಟ್ಟಣದ ಮೀನು ಮಾರುಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ ಇದ್ದಲ್ಲಿ, ಅಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಈ ಬೇಡಿಕೆಗೆ ಸ್ಪಂದನೆ ದೊರೆಯದಿದ್ದರೆ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಸಿದರು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಂಘಟನೆಯ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.

ನೂತನ ತಾಲೂಕು ಸಮಿತಿ ಆಯ್ಕೆ

ಸಭೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ತಾಲೂಕು ಮಟ್ಟದ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ವಕೀಲ ಗಣೇಶ ಪಾಟಣಕರ್, ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್ ಹಾಗೂ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆಯಾಗಿ ಅನ್ನಪೂರ್ಣ ಎಸ್. ಕಲಾಲ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಪಟ್ಟಣದ ಹಲವು ಬೀದಿಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *