ಊರಲ್ಲಿ ‘ನದಿ ಉಳಿಸಿ’ ಜಪ: ಬೆಂಗಳೂರಲ್ಲಿ ಸಿಎಂ ಮುಂದೆ ‘ಗಪ್ ಚುಪ್’! ಬೇಡ್ತಿ–ವರದಾ ಯೋಜನೆ: ಕಾಂಗ್ರೆಸ್ ಶಾಸಕರ ನಿಲುವಿನ ಬಗ್ಗೆ ಅನಂತಮೂರ್ತಿ ಹೆಗಡೆ ಪ್ರಶ್ನೆ?

ಹಂಚಿಕೊಳ್ಳಿ

ಶಿರಸಿ: ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದು ಹಾಗೂ ಯೋಜನೆಯ ಡಿಪಿಆರ್‌ ಸಿದ್ಧಪಡಿಸುವ ಪ್ರಕ್ರಿಯೆಗೆ ಮುಂದಾಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಿಲುವನ್ನು ಪ್ರಶ್ನಿಸಿರುವ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಯೋಜನೆಯ ವಿರುದ್ಧ ಸರ್ಕಾರದ ಮಟ್ಟದಲ್ಲಿಯೂ ಸ್ಪಷ್ಟ ವಿರೋಧ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿರಸಿಯಲ್ಲಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಭಿಮಣ್ಣ ನಾಯ್ಕ್ , ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದರು. ಆದರೆ, ರಾಜ್ಯ ಸರ್ಕಾರ ಯೋಜನೆಗೆ ಮುಂದಾಗಿರುವ ಸಂದರ್ಭದಲ್ಲಿ ಶಾಸಕರು ತಮ್ಮ ವಿರೋಧವನ್ನು ಬಹಿರಂಗವಾಗಿ ದಾಖಲಿಸದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಸಂಸದರು ಮತ್ತು ಶಾಸಕರು ಈ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಯೋಜನೆಯ ಕುರಿತು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿ, ಅದನ್ನು ಜಾರಿಗೊಳಿಸದಂತೆ ಮನವಿ ಸಲ್ಲಿಸಿದ್ದರು. ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಯೋಜನೆಗೆ ರಾಜ್ಯದ ತಾತ್ವಿಕ ಒಪ್ಪಿಗೆ ಇರುವುದನ್ನು ತಿಳಿಸಿ, ಡಿಪಿಆರ್‌ ಸಿದ್ಧಪಡಿಸುವಂತೆ ಒತ್ತಾಯಿಸಿರುವುದು ಕಳವಳಕಾರಿ ಸಂಗತಿ ಎಂದು ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕ ಸಭೆಗಳಲ್ಲಿ ಯೋಜನೆಯನ್ನು ವಿರೋಧಿಸುವ ಜನಪ್ರತಿನಿಧಿಗಳು ಸರ್ಕಾರದ ನಿರ್ಧಾರಗಳ ವಿಚಾರದಲ್ಲಿಯೂ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಜನರ ಮುಂದೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಸರ್ಕಾರದ ಮಟ್ಟದಲ್ಲಿ ಮೌನ ವಹಿಸುವುದು ಸರಿಯಾದ ರಾಜಕೀಯ ನಡೆ ಅಲ್ಲ ಎಂದು ಅವರು ಟೀಕಿಸಿದ್ದಾರೆ.

ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯಿಂದ ಜಿಲ್ಲೆಯ ಪರಿಸರ, ನದಿ ಕಣಿವೆ ಹಾಗೂ ಸ್ಥಳೀಯ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಜನರಲ್ಲಿ ಆತಂಕವಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಜನರ ಪರವಾಗಿ ದೃಢವಾಗಿ ನಿಲ್ಲಬೇಕಿದ್ದು, ಯೋಜನೆಯ ಮುಂದಿನ ಪ್ರಕ್ರಿಯೆಗಳಿಗೆ ಅವಕಾಶ ನೀಡದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ಕಾಂಗ್ರೆಸ್ ಶಾಸಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ಸ್ಥಳೀಯರ ಆತಂಕಗಳನ್ನು ಪರಿಣಾಮಕಾರಿಯಾಗಿ ತರುವ ಮೂಲಕ ಡಿಪಿಆರ್‌ ಸಿದ್ಧತೆ ಸೇರಿದಂತೆ ಯೋಜನೆಯ ಮುಂದಿನ ಕ್ರಮಗಳನ್ನು ತಡೆಹಿಡಿಯಲು ಪ್ರಯತ್ನಿಸಬೇಕು ಎಂದು ಅನಂತಮೂರ್ತಿ ಹೆಗಡೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *