ಹಳ್ಳಿನ್ಯೂಸ್ ವರದಿ:
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರ ಅರಬೈಲ್ ಘಟ್ಟದ ಶಿರಲೆ ಕ್ರಾಸ್ ಸಮೀಪ ಅಪಾಯಕಾರಿ ತಿರುವಿನಲ್ಲಿ ಬೃಹತ್ ಟ್ಯಾಂಕರ್ವೊಂದು ಸುಮಾರು ಒಂದು ತಿಂಗಳಿನಿಂದ ನಿಂತಿದ್ದು, ರಸ್ತೆಯ ಬಹುಭಾಗವನ್ನು ಆಕ್ರಮಿಸಿಕೊಂಡಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತದ ಆತಂಕ ಎದುರಾಗಿದೆ.
ಕಳೆದ ಸೆಪ್ಟೆಂಬರ್ 6ರ ಸುಮಾರಿಗೆ ಇದೇ ಸ್ಥಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು. ಆ ಘಟನೆಯ ಬಳಿಕ ಟ್ಯಾಂಕರ್ ಅಲ್ಲಿಯೇ ನಿಂತಿದ್ದರೂ, ಇದುವರೆಗೆ ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅಪಾಯಕಾರಿ ತಿರುವಿನಲ್ಲೇ ಟ್ಯಾಂಕರ್ ನಿಂತಿರುವುದಲ್ಲದೆ, ಒಂದು ಬದಿಯ ಅರ್ಧದಷ್ಟು ರಸ್ತೆ ಆಕ್ರಮಿಸಿಕೊಂಡಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಎದುರಿನಿಂದ ಬಂದ ವಾಹನಗಳು ಕಾಣದೆ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ.
ತಿರುವಿನಲ್ಲಿ ಎದುರಾಗುವ ಅಪಾಯ
ಅರಬೈಲ್ ಘಟ್ಟವು ವಾಹನ ಸಂಚಾರದ ದೃಷ್ಟಿಯಿಂದ ಪ್ರಮುಖ ಮಾರ್ಗವಾಗಿದ್ದು, ಇಲ್ಲಿನ ತಿರುವುಗಳಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಂತಹ ಸ್ಥಳದಲ್ಲೇ ಬೃಹತ್ ಟ್ಯಾಂಕರ್ ರಸ್ತೆ ಆಕ್ರಮಿಸಿಕೊಂಡು ನಿಂತಿರುವುದು ಅಪಘಾತದ ಅಪಾಯವನ್ನು ಹೆಚ್ಚಿಸಿದೆ. ಎದುರಿನಿಂದ ವಾಹನಗಳು ಬಂದಾಗ ಟ್ಯಾಂಕರ್ನಿಂದಾಗಿ ಸಂಚಾರಕ್ಕೆ ತೀರಾ ಅಡಚಣೆ ಉಂಟಾಗುತ್ತಿದ್ದು , ರಾತ್ರಿ ವೇಳೆ ಈ ಅಪಾಯ ಮತ್ತಷ್ಟು ಗಂಭೀರವಾಗುತ್ತಿದೆ.
ಹೈವೇ ಪೆಟ್ರೋಲಿಂಗ್ ಸಿಬ್ಬಂದಿಯ ಗಮನಕ್ಕೆ ಬಂದಿಲ್ಲವೇ?
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಂಚರಿಸುವ ಪೊಲೀಸ್ ಹೈವೇ ಪೆಟ್ರೋಲಿಂಗ್ ವಾಹನಗಳ ಸಿಬ್ಬಂದಿಗೆ ಈ ಟ್ಯಾಂಕರ್ ಕಾಣಿಸುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಸ್ಥಳದಲ್ಲೇ, ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಟ್ಯಾಂಕರ್ ತಿಂಗಳುಗಟ್ಟಲೆ ನಿಂತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಲಿ
ಈಗಾಗಲೇ ಜೀವಹಾನಿ ಸಂಭವಿಸಿರುವ ಸ್ಥಳದಲ್ಲಿ ಮತ್ತೊಂದು ಅಪಘಾತಕ್ಕೆ ಅವಕಾಶ ಮಾಡಿಕೊಡದಂತೆ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ. ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಥಳ ಪರಿಶೀಲನೆ ನಡೆಸಿ, ಟ್ಯಾಂಕರ್ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ತೆರವುಗೊಳಿಸುವವರೆಗೆ ವಾಹನ ಸವಾರರ ಸುರಕ್ಷತೆಗಾಗಿ ಸೂಕ್ತ ಎಚ್ಚರಿಕೆ ಫಲಕಗಳು ಮತ್ತು ಅಗತ್ಯ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಕಲ್ಪಿಸಬೇಕು.
ಮತ್ತೊಂದು ಅಪಘಾತ ಸಂಭವಿಸಿ ಜೀವಹಾನಿಯಾದ ಬಳಿಕ ಎಚ್ಚೆತ್ತುಕೊಳ್ಳುವ ಬದಲು, ಸಂಭವನೀಯ ದುರಂತವನ್ನು ತಡೆಯಲು ಅಧಿಕಾರಿಗಳು ಈಗಲೇ ಕ್ರಮ ಕೈಗೊಳ್ಳಬೇಕಿದೆ. ಸಾರ್ವಜನಿಕರ ಜೀವ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿ ತಿರುವಿನಲ್ಲಿ ನಿಂತಿರುವ ಟ್ಯಾಂಕರ್ ತೆರವಿಗೆ ಸಂಬಂಧಪಟ್ಟ ಇಲಾಖೆ ತುರ್ತು ಆದ್ಯತೆ ನೀಡಬೇಕಿದೆ.















Leave a Reply