
ಬಡವರಿಗೆ ಕಣ್ಣೀರಿನ ಭಾಗ್ಯ ನೀಡುತ್ತಿರುವ ಸರ್ಕಾರ; ಆಸ್ತಿ ತೆರಿಗೆ ವಿವಾದದಲ್ಲಿ ಪ್ರಸಾದ್ ಹೆಗಡೆ ವಾಗ್ದಾಳಿ
ಯಲ್ಲಾಪುರ: ಸರ್ಕಾರಿ ಹಾಗೂ ಅರಣ್ಯ ಪ್ರದೇಶಗಳಲ್ಲಿರುವ ಆಸ್ತಿಗಳಿಗೆ ತೆರಿಗೆ ನಿರಾಕರಣೆ ಮತ್ತು ಇ-ಸ್ವತ್ತು 2.0 ತಂತ್ರಾಂಶದಿಂದ ಆಸ್ತಿಗಳನ್ನು ಕೈಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಗಳು ಕೇವಲ ‘ವಾಷಿಂಗ್ ಮಷಿನ್’ ಆದೇಶಗಳಾಗಿವೆ. ಇಂತಹ ಆದೇಶಗಳ ಮೂಲಕ ಬಡ ಜನರಿಗೆ ಪದೇಪದೇ ಕಣ್ಣೀರು ಹಾಕಿಸುವ ‘ಕಣ್ಣೀರಿನ ಭಾಗ್ಯ’ವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ಯಲ್ಲಾಪುರ ಮಂಡಳ ಬಿಜೆಪಿ ಅಧ್ಯಕ್ಷ ಪ್ರಸಾದ್ ಹೆಗಡೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಸುತ್ತೋಲೆಗೆ ತಡೆ ನೀಡಿರುವುದನ್ನು ಬಡವರ ಪರವಾದ ಶಾಶ್ವತ ಪರಿಹಾರವೆಂದು ಬಿಂಬಿಸುವುದು ಸರಿಯಲ್ಲ. ಜನರ ಆಕ್ರೋಶ ಮತ್ತು ಬಿಜೆಪಿ ನಡೆಸಿದ ಪ್ರತಿಭಟನೆಗೆ ವ್ಯಕ್ತವಾದ ಬೆಂಬಲದಿಂದಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆಯಾಗಬಹುದು ಎಂಬ ಆತಂಕದಿಂದ ಸರ್ಕಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೇಳಿಕೆಗೆ ಯಲ್ಲಾಪುರ ಕ್ಷೇತ್ರದ ಶಾಸಕರು ಆಕ್ಷೇಪ ವ್ಯಕ್ತಪಡಿಸಿರುವುದನ್ನೂ ಖಂಡಿಸಿರುವ ಪ್ರಸಾದ್ ಹೆಗಡೆ, ಬಡವರ ಆಸ್ತಿ ಹಕ್ಕು ಹಾಗೂ ತೆರಿಗೆ ಸಮಸ್ಯೆಗೆ ತಾತ್ಕಾಲಿಕ ಆದೇಶಗಳಿಂದ ಪರಿಹಾರ ಸಿಗುವುದಿಲ್ಲ. ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಳೆದು, ಶಾಶ್ವತ ಕಾನೂನು ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ತಾತ್ಕಾಲಿಕ ತಡೆಯಲ್ಲ, ಶಾಶ್ವತ ಪರಿಹಾರ ಬೇಕು
ರಾಜ್ಯದಲ್ಲಿ ಅರಣ್ಯ ಅತಿಕ್ರಮಣಕ್ಕೆ ಸಂಬಂಧಿಸಿದ ಸಮಸ್ಯೆ ದೀರ್ಘಕಾಲದಿಂದ ಕಾಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮೊದಲು ಕೇಂದ್ರ ಸರ್ಕಾರಕ್ಕೆ ಅಗತ್ಯವಾದ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಬೇಕು. ಬಳಿಕ ಸಂಬಂಧಪಟ್ಟ ಇಲಾಖೆಯ ಸಚಿವರು ಸಂಸದರ ನಿಯೋಗವನ್ನು ದೆಹಲಿಗೆ ಕರೆದೊಯ್ದು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಸಮಸ್ಯೆಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ತರುವ ಉದ್ದೇಶವಿದ್ದರೆ, ಸರ್ಕಾರ ಅದನ್ನು ಸ್ಪಷ್ಟವಾಗಿ ಘೋಷಿಸಬೇಕು. ಕೇವಲ ತಾತ್ಕಾಲಿಕ ತಡೆಯಾಜ್ಞೆ ನೀಡಿ ಅದನ್ನೇ ದೊಡ್ಡ ಸಾಧನೆಯೆಂದು ಬಿಂಬಿಸುವ ಬದಲು, ಜನರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಜಿಲ್ಲಾದ್ಯಂತ ನಡೆಸಿದ ಪ್ರತಿಭಟನೆಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜನರ ಸಮಸ್ಯೆಗಳನ್ನು ಕಡೆಗಣಿಸಿ ತಾತ್ಕಾಲಿಕ ಆದೇಶಗಳ ಮೂಲಕ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಸರ್ಕಾರ ಮುಂದಾದರೆ, ಬಿಜೆಪಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ .
ಪ್ರಸಾದ್ ಹೆಗಡೆ ( ಅಧ್ಯಕ್ಷರು ಬಾ.ಜ.ಪಾ ಯಲ್ಲಾಪುರ ಮಂಡಳ )















Leave a Reply