ಕಾಗೇರಿ ಟೀಕೆಗೆ ಹೆಬ್ಬಾರ್ ತಿರುಗೇಟು: ಕಣ್ಣೊರೆಸುವ ತಂತ್ರವಲ್ಲ, ಜನರಿಗೆ ಶಾಶ್ವತ ನ್ಯಾಯ ಕೊಡಿಸುವುದೇ ನಮ್ಮ ಗುರಿ!

ಹಂಚಿಕೊಳ್ಳಿ

ಅರಣ್ಯ ಭೂಮಿಯಲ್ಲಿ ವಾಸಿಸುವವರ ಹಿತ ಕಾಯಲು ಕಾನೂನು ತಿದ್ದುಪಡಿ ಅಗತ್ಯ; ಕೇಂದ್ರದ ಮೇಲೆ ಕಾಗೇರಿ ಒತ್ತಡ ತರಲಿ ಎಂದ ಶಾಸಕ

ಯಲ್ಲಾಪುರ: ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳ ತೆರಿಗೆ ಸಂಗ್ರಹ ಮತ್ತು ಇ-ಸ್ವತ್ತು 2.0 ತಂತ್ರಾಂಶದಲ್ಲಿ ಆಸ್ತಿಗಳನ್ನು ಕೈಬಿಡುವ ಸಂಬಂಧದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿರುವುದನ್ನು ಕಣ್ಣೊರೆಸುವ ಕ್ರಮ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿರುವುದಕ್ಕೆ ಶಾಸಕ ಶಿವರಾಮ ಹೆಬ್ಬಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದೇ ಸರ್ಕಾರದ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೆಬ್ಬಾರ್, ಆಗಸ್ಟ್ 13ರಂದು ಹೊರಡಿಸಲಾದ ಸುತ್ತೋಲೆಯಿಂದ ಜನರಿಗೆ ಎದುರಾಗಿರುವ ತೊಂದರೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಅಗತ್ಯ ಕಾನೂನು ರೂಪಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಬಡವರು ಹಾಗೂ ಅರಣ್ಯ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳ ಹಕ್ಕುಗಳ ರಕ್ಷಣೆಯೂ ಮಹತ್ವದ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕಾದ ಸಂಸದರು, ಕೇವಲ ಟೀಕೆ ಮಾಡುವುದಕ್ಕಿಂತ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಆದ್ಯತೆ ನೀಡಬೇಕು ಎಂದು ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.

ಅತಿಕ್ರಮಣದಾರರಿಗೆ ಭೂಮಿ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಸಂಸದ ಕಾಗೇರಿ ಅವರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದ್ದಾರೆ. ಭೂಮಿಯ ಹಕ್ಕು ಸಂಬಂಧದ ನಿಯಮಗಳಲ್ಲಿ ಮೂರು ತಲೆಮಾರುಗಳ ವಾರಸುದಾರಿಕೆಯ ಮಾನದಂಡವನ್ನು ಒಂದು ತಲೆಮಾರಿಗೆ ಇಳಿಸುವ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಾನೂನು ತಿದ್ದುಪಡಿಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಕ್ರಮಗಳನ್ನು ಕಣ್ಣೊರೆಸುವ ತಂತ್ರ ಎಂದು ಟೀಕಿಸುವುದು ಸರಿಯಲ್ಲ. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸೂಕ್ತ ಕಾನೂನು ಪರಿಹಾರ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಹೆಬ್ಬಾರ್ ಹೇಳಿದ್ದಾರೆ.

ಈ ಸಮಸ್ಯೆಗೆ ತಾತ್ಕಾಲಿಕ ತಡೆಯಿಂದ ಮಾತ್ರ ಪರಿಹಾರ ಸಿಗುವುದಿಲ್ಲ; ಶಾಶ್ವತ ಪರಿಹಾರ ದೊರೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಹೋರಾಟಗಾರ ರವೀಂದ್ರ ನಾಯ್ಕ ಕೂಡ ಮನವಿ ಮಾಡಿದ್ದಾರೆ. ಅವರ ಕಳಕಳಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜನರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಶಾಸಕ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಕಾನೂನು ತಿದ್ದುಪಡಿಗಾಗಿ ಕಾಗೇರಿ ಅವರು ಪ್ರಯತ್ನಿಸಲಿ. ರಾಜ್ಯ ಸರ್ಕಾರದ ಮಟ್ಟದಲ್ಲಿ ತಮ್ಮ ಜವಾಬ್ದಾರಿಯನ್ನು ತಾವು ನಿರ್ವಹಿಸುವುದಾಗಿ ತಿಳಿಸಿದ ಹೆಬ್ಬಾರ್, ಇಬ್ಬರೂ ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಜನರಿಗೆ ನ್ಯಾಯ ಒದಗಿಸಬಹುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *