ರಾತ್ರೋರಾತ್ರಿ ‘ಹೋರಿ’ ಸವಾರಿ; ಪೊಲೀಸರನ್ನ ನೋಡಿ ಕಟುಕರು ಲಾರಿ ಬಿಟ್ಟು ಪರಾರಿ!

ಹಂಚಿಕೊಳ್ಳಿ

ಚಾಲಕ–ಕ್ಲೀನರ್ ಪರಾರಿ; ₹20 ಲಕ್ಷ ಮೌಲ್ಯದ ಜಾನುವಾರು ಮತ್ತು ಲಾರಿ ಪೊಲೀಸರ ವಶಕ್ಕೆ

ಭಟ್ಕಳ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಶಿರಾಲಿ ಚೆಕ್‌ಪೋಸ್ಟ್ ಬಳಿ ತಡೆದು ಪರಿಶೀಲನೆ ನಡೆಸಿದ ವೇಳೆ 13 ಹೋರಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಘಟನೆ ಮಂಗಳವಾ ನಡೆದಿದೆ.

ಹೊನ್ನಾವರ ಕಡೆಯಿಂದ ಭಟ್ಕಳದತ್ತ ಬರುತ್ತಿದ್ದ  ಲಾರಿಯನ್ನು ಶಿರಾಲಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಲಾರಿಯೊಳಗೆ 13 ಜಾನುವಾರುಗಳನ್ನು ಅಸಮರ್ಪಕವಾಗಿ ಮತ್ತು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಬೆಳಕಿಗೆ ಬಂದಿದೆ.

ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಹಾಗೂ ಮೇವು ಒದಗಿಸದೆ, ಅಗತ್ಯ ಅನುಮತಿ ಪಡೆಯದೇ ವಧೆ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ 13 ಹೋರಿಗಳು ಹಾಗೂ ಸಾಗಾಟಕ್ಕೆ ಬಳಸಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಹೋರಿಗಳ ಅಂದಾಜು ಮೌಲ್ಯ ₹13 ಲಕ್ಷವಾಗಿದ್ದು, ಲಾರಿಯ ಮೌಲ್ಯ ಸುಮಾರು ₹7 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರನ್ನು ಕಂಡ ತಕ್ಷಣ ಲಾರಿ ಚಾಲಕ ಮತ್ತು ಕ್ಲೀನರ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಪಿಎಸ್ಐ ಭರಮಪ್ಪ ಬೆಳಗಲಿ ಅವರ ನೇತೃತ್ವದಲ್ಲಿ ಮಂಜುನಾಥ ಖಾರ್ವಿ, ನಾಗರಾಜ ಹೋತನಳ್ಳಿ, ಅಂಬರೀಷ್ ಕುಂಬಾರಿ, ಮೋಹನ ಕಬ್ಬೇರ, ಸಂತೋಷ ಹಡಪದ ಹಾಗೂ ಹೋಂ ಗಾರ್ಡ್ ವೆಂಕಟ್ರಮಣ ಗೊಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣದ ತನಿಖೆಯನ್ನು ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *