ಶಿರಸಿ: ಶಿರಸಿ–ಸಿದ್ದಾಪುರ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಪ್ರದೇಶದ ಹಸಿರು ಪರಿಸರ ಹಾಗೂ ಸರ್ಕಾರಿ ಬೆಟ್ಟಗಳ ಸಂರಕ್ಷಣೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರಿ ಬೆಟ್ಟಗಳು ಮತ್ತು ಹಸಿರು ಪ್ರದೇಶಗಳನ್ನು ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಭೀಮ ಗರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ ಮಿಂಟಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿರಸಿ–ಸಿದ್ದಾಪುರ ಹಿಂದೆ ಸಮೃದ್ಧ ಹಸಿರು ಪರಿಸರ ಮತ್ತು ಉತ್ತಮ ಹವಾಮಾನಕ್ಕೆ ಹೆಸರುವಾಸಿಯಾಗಿತ್ತು. ಆದರೆ ಇಂದು ಮಳೆಯ ಕೊರತೆ, ಹೆಚ್ಚುತ್ತಿರುವ ಧಗೆ ಹಾಗೂ ಬರದ ವಾತಾವರಣ ಕಂಡುಬರುತ್ತಿದೆ. ಈ ಪರಿಸ್ಥಿತಿಗೆ ಪರಿಸರ ನಾಶವೂ ಒಂದು ಕಾರಣವಾಗಿದ್ದು, ಸರ್ಕಾರಿ ಬೆಟ್ಟಗಳು ಹಾಗೂ ಹಸಿರು ಕಾನನವನ್ನು ಅಕ್ರಮವಾಗಿ ಲೂಟಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರಿ ಬೆಟ್ಟಗಳನ್ನು ಕೆಲವರು ತಮ್ಮ ಸ್ವಂತ ಆಸ್ತಿಯಂತೆ ಪರಿಗಣಿಸಿ, ಬ್ರಿಟಿಷರ ಕಾಲದಿಂದಲೂ ತಮ್ಮ ಹಕ್ಕು ಇದೆ ಎಂಬ ರೀತಿಯಲ್ಲಿ ಹೇಳಿಕೊಳ್ಳುತ್ತಿದ್ದಾರೆ ಎಂದು ಅರ್ಜುನ್ ಮಿಂಟಿ ಆರೋಪಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳ ಇಂತಹ ನಡೆಗೆ ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಈ ವಿಚಾರ ಈಗ ಲೋಕಾಯುಕ್ತದ ವಿಚಾರಣೆಯ ಹಂತಕ್ಕೂ ಬಂದಿದ್ದು, ಅರಣ್ಯ ಮತ್ತು ಕಂದಾಯ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರಿ ಬೆಟ್ಟದ ಜಾಗದಲ್ಲಿ ಮತ್ತೆ ತಂತಿ ಬೇಲಿ ಅಳವಡಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಲೋಕಾಯುಕ್ತದ ತನಿಖೆ ಕಟ್ಟುನಿಟ್ಟಾಗಿ ನಡೆದರೆ, ಇದಕ್ಕೆ ಸಂಬಂಧಿಸಿದ ಸತ್ಯಾಂಶಗಳು ಹೊರಬರಲಿವೆ ಎಂದು ಮಿಂಟಿ ತಿಳಿಸಿದ್ದಾರೆ.
ಅಧಿಕಾರಿಗಳ ಮೌನ ಹಾಗೂ ಭೂ ಅಕ್ರಮ ನಡೆಸುತ್ತಿರುವವರ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ. ಪ್ರಕರಣ ಲೋಕಾಯುಕ್ತದ ಮುಂದೆ ಇರುವ ಸಂದರ್ಭದಲ್ಲಿ ತನಿಖೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕಾನೂನು ಹೋರಾಟದಲ್ಲಿ ಇಷ್ಟು ದಿನ ಏಕೆ ವಿಳಂಬವಾಯಿತು ಎಂಬುದಕ್ಕೂ ಸ್ಪಷ್ಟನೆ ನೀಡಿರುವ ಅವರು, ಕಾನೂನು ಪ್ರಕ್ರಿಯೆಗಳನ್ನು ಅನುಸರಿಸುವುದು ಹಾಗೂ ಅಗತ್ಯ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದಕ್ಕಾಗಿ ಸಮಯ ತೆಗೆದುಕೊಳ್ಳಲಾಗಿತ್ತು. ಹೋರಾಟದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ನಡೆದಿರುವ ಕಾಗದದ ಮೇಲಿನ ಎಫ್ಐಆರ್ಗಳು ಮತ್ತು ಕಣ್ಣೊರೆಸುವ ಕ್ರಮಗಳಿಂದ ಲೋಕಾಯುಕ್ತದ ತನಿಖೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಬೆಟ್ಟದ ವಿಚಾರದಲ್ಲಿ ಅಧಿಕಾರಿಗಳ ಜವಾಬ್ದಾರಿಯನ್ನೂ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮವಾಗಿ ನಿರ್ಮಿಸಿರುವ ತಂತಿ ಬೇಲಿ, ಕೋಟೆ ಅಥವಾ ಇತರ ಯಾವುದೇ ನಿರ್ಮಾಣಗಳಿದ್ದರೆ ಅವುಗಳನ್ನು ಕಾನೂನುಬದ್ಧವಾಗಿ ತೆರವುಗೊಳಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಮಾನತು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ನಿರ್ಮಾಣಗಳನ್ನು ಧ್ವಂಸಗೊಳಿಸುವ ಮೂಲಕ ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕು ಎಂದು ಅರ್ಜುನ ಮಿಂಟಿ ಒತ್ತಾಯಿಸಿದ್ದಾರೆ.
ಸರ್ಕಾರಿ ಬೆಟ್ಟಗಳ ಸಂರಕ್ಷಣೆ, ಪರಿಸರ ರಕ್ಷಣೆ ಹಾಗೂ ಅಕ್ರಮ ಒತ್ತುವರಿಗಳ ವಿರುದ್ಧ ತಮ್ಮ ಕಾನೂನು ಹೋರಾಟ ಮುಂದುವರಿಯಲಿದೆ. ಶೀಘ್ರದಲ್ಲೇ ಈ ಪ್ರಕರಣದಲ್ಲಿ ನಿರ್ಣಾಯಕ ಬೆಳವಣಿಗೆಗಳು ನಡೆಯಲಿದ್ದು, ಅಕ್ರಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.















Leave a Reply