ಕಾರವಾರ: ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕರು ಹಾಗೂ ಚಾಲನಾ ಪರವಾನಗಿ (ಲೈಸೆನ್ಸ್) ಇಲ್ಲದವರು ವಾಹನ ಚಲಾಯಿಸುವುದಕ್ಕೆ ಕಡಿವಾಣ ಹಾಕಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಂಡಿದೆ. ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ವರೆಗಿನ ಒಂಬತ್ತು ತಿಂಗಳ ಅವಧಿಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ವ್ಯಾಪಕ ಕಾನೂನು ಕ್ರಮ ಜರುಗಿಸಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಜಿಲ್ಲಾದ್ಯಂತ ಒಟ್ಟು 131 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಈ ಪ್ರಕರಣಗಳ ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡಿದ್ದು, ಕಾನೂನು ಉಲ್ಲಂಘಿಸಿದ ವಾಹನ ಮಾಲೀಕರು ಹಾಗೂ ಪೋಷಕರಿಗೆ ನ್ಯಾಯಾಲಯವು ಒಟ್ಟು ₹13,09,000 ದಂಡ ವಿಧಿಸಿದೆ.
ಭಟ್ಕಳದಲ್ಲೇ ಅತಿ ಹೆಚ್ಚು ಪ್ರಕರಣ:
ಜಿಲ್ಲೆಯ ಒಟ್ಟು ಪ್ರಕರಣಗಳ ಪೈಕಿ ಭಟ್ಕಳ ನಗರ ಮತ್ತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇಲ್ಲಿ ಒಟ್ಟು 45 ಪ್ರಕರಣಗಳು ದಾಖಲಾಗಿದ್ದು, ನಿಯಮ ಉಲ್ಲಂಘಿಗಳಿಗೆ ₹5,38,500 ದಂಡ ವಿಧಿಸುವ ಮೂಲಕ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪೋಷಕರಿಗೆ ಪೊಲೀಸ್ ಇಲಾಖೆ ಮನವಿ:
“ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವುದು ಕೇವಲ ಕಾನೂನುಬಾಹಿರ ಅಷ್ಟೇ ಅಲ್ಲ, ಅವರ ಹಾಗೂ ಸಾರ್ವಜನಿಕರ ಜೀವಕ್ಕೂ ಅತ್ಯಂತ ಅಪಾಯಕಾರಿ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳಿಗೆ ವಾಹನಗಳನ್ನು ನೀಡಬಾರದು. ಮುಂದಿನ ದಿನಗಳಲ್ಲೂ ಇಂತಹ ಪ್ರಕರಣಗಳ ವಿರುದ್ಧ ಕಠಿಣ ತಪಾಸಣೆ ಮುಂದುವರಿಯಲಿದ್ದು, ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ಸಹಕರಿಸಬೇಕು” ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ವಿನಂತಿಸಿದೆ.














Leave a Reply