
ಯಲ್ಲಾಪುರ: ಪಟ್ಟಣದ ರವೀಂದ್ರ ನಗರದಲ್ಲಿ ಕಳೆದ ಸುಮಾರು ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಸೆ.30, 2026ರಿಂದ ಮುಚ್ಚಲಾಗುವುದು ಎಂಬ ಮಾಹಿತಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಯಲ್ಲಾಪುರ ಪಟ್ಟಣದ 17ನೇ ವಾರ್ಡ್ ರವೀಂದ್ರ ನಗರ, 18ನೇ ವಾರ್ಡ್ ವಡ್ಡರ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಈ ಆರೋಗ್ಯ ಕೇಂದ್ರವು ಸ್ಥಳೀಯವಾಗಿ ಆರೋಗ್ಯ ಸೇವೆ ಒದಗಿಸುವ ಪ್ರಮುಖ ಕೇಂದ್ರವಾಗಿತ್ತು. ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ದೂರದ ಆಸ್ಪತ್ರೆಗಳಿಗೆ ತೆರಳಲು ತೊಂದರೆ ಅನುಭವಿಸುವವರಿಗೆ ಈ ಕೇಂದ್ರದಿಂದ ಸಾಕಷ್ಟು ಅನುಕೂಲವಾಗುತ್ತಿತ್ತು.

ಆರೋಗ್ಯ ಕೇಂದ್ರವನ್ನು ಮುಚ್ಚಿದರೆ ಸುತ್ತಮುತ್ತಲಿನ ನಿವಾಸಿಗಳು ಮೂಲಭೂತ ಆರೋಗ್ಯ ಸೇವೆಗಾಗಿ ದೂರದ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಇದರಿಂದ ಸಾರ್ವಜನಿಕರಿಗೆ, ಅದರಲ್ಲೂ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಬಡ ಕುಟುಂಬಗಳಿಗೆ ಹೆಚ್ಚಿನ ತೊಂದರೆಯಾಗಲಿದೆ ಎಂಬ ಆತಂಕ ಸ್ಥಳೀಯರಲ್ಲಿದೆ.
ಈ ಹಿನ್ನೆಲೆಯಲ್ಲಿ ಯಲ್ಲಾಪುರ ಪಟ್ಟಣದ ರವೀಂದ್ರ ನಗರ ವಾರ್ಡ್ನ ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಸೋಮು ನಾಯ್ಕ ಹಾಗೂ 50ಕ್ಕೂ ಹೆಚ್ಚು ಸ್ಥಳೀಯರು ಆರೋಗ್ಯ ಕೇಂದ್ರವನ್ನು ಮುಚ್ಚುವ ನಿರ್ಧಾರವನ್ನು ಮರುಪರಿಶೀಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ, ತಹಶೀಲ್ದಾರರು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿರುವ ಸೋಮು ನಾಯ್ಕ ಹಾಗೂ ಸ್ಥಳಿಯರು , ಜನರ ಆರೋಗ್ಯದ ಅಗತ್ಯತೆ ಹಾಗೂ ಸಮಸ್ಯೆಗಳನ್ನು ಪರಿಗಣಿಸಿ ಆಯುಷ್ಮಾನ್ ಆರೋಗ್ಯ ಕೇಂದ್ರವು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
“ಸ್ಥಳೀಯ ಜನರ ಅನುಕೂಲಕ್ಕಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕೇಂದ್ರವನ್ನು ಮುಚ್ಚುವ ಬದಲು, ಜನರ ಬೇಡಿಕೆಯನ್ನು ಪರಿಗಣಿಸಿ ಮುಂದುವರಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.















Leave a Reply