ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಹೋರಾಟಕ್ಕೆ ಸಿದ್ಧತೆ

ಹಂಚಿಕೊಳ್ಳಿ

ನ.3ರಂದು ರಾಷ್ಟ್ರೀಯ ಹೆದ್ದಾರಿ ತಡೆಗೆ ಕರೆ

 

ಯಲ್ಲಾಪುರ: ಬೇಡ್ತಿ–ಗಂಗಾವಳಿ–ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಎರಡನೇ ಪೂರ್ವಭಾವಿ ಸಮಾಲೋಚನಾ ಸಭೆ ಶನಿವಾರ ಯಲ್ಲಾಪುರದಲ್ಲಿ ನಡೆಯಿತು.

ಈ ಹಿಂದೆ ಪ್ರತಿಭಟನೆ, ಪತ್ರ ಚಳವಳಿ, ಮನವಿ ಸೇರಿದಂತೆ ಹಲವು ಹಂತಗಳ ಹೋರಾಟಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೆ ಯೋಜನೆ ಕೈಬಿಡುವ ಕುರಿತು ಸರ್ಕಾರದಿಂದ ಸ್ಪಷ್ಟ ಕ್ರಮ ಕಂಡುಬರದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಬೃಹತ್ ಜನಾಂದೋಲನ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ನವೆಂಬರ್ 3ರಂದು ರಸ್ತೆ ರೋಖೋ ನಡೆಸಲು ಸಭೆಯಲ್ಲಿ ದಿನಾಂಕ ನಿಗದಿಪಡಿಸಲಾಯಿತು.

ಹೋರಾಟದ ಸಂಘಟನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಸಲುವಾಗಿ ‘ಯಲ್ಲಾಪುರ ರಸ್ತೆ ತಡೆ ಸಂಚಾಲನಾ ಸಮಿತಿ’ ರಚಿಸಲಾಯಿತು. ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರನ್ನು ಸಮಿತಿಯ ಅಧ್ಯಕ್ಷರಾಗಿ ಹಾಗೂ ಹರಿಪ್ರಕಾಶ ಕೋಣೆಮನೆ ಅವರನ್ನು ಪ್ರಧಾನ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಯಲ್ಲಾಪುರ ತಾಲೂಕು ಹಾಗೂ ಹಳವಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಸುಮಾರು 30 ಮಂದಿಯನ್ನು ಸಂಚಾಲಕರಾಗಿ ನೇಮಿಸಲಾಯಿತು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಉಪಸಮಿತಿಗಳನ್ನು ರಚಿಸಿ ಹೋರಾಟದ ಸಂಘಟನೆಯನ್ನು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ರಸ್ತೆ ತಡೆ ಕಾರ್ಯಕ್ರಮಕ್ಕೆ ಸುಮಾರು 10ರಿಂದ 12 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಲಾಯಿತು.

ಕದಂಬ ಸಂಸ್ಥೆಯ ವಿಶ್ವೇಶ್ವರ ಕೋಟೆಮನೆ ಅವರು ಸಮಿತಿಯ ರಚನೆ, ಕಾರ್ಯವ್ಯಾಪ್ತಿ ಹಾಗೂ ಸಂಘಟನಾ ಕಾರ್ಯವಿಧಾನದ ಕುರಿತು ವಿವರಿಸಿದರು. ಕೊಳ್ಳ ಸಮಿತಿಯ ಸಂಚಾಲಕರಾದ ವಿಶ್ವನಾಥ ಹೆಗಡೆ ಶೀಗೆಹಳ್ಳಿ ಹಾಗೂ ಜಿ.ಆರ್. ಹೆಗಡೆ ಬೆಳ್ಳೆಕೇರಿ ಅವರು ಮುಂದಿನ ಹೋರಾಟದ ಸ್ವರೂಪದ ಬಗ್ಗೆ ಮಾತನಾಡಿದರು. ವಿವಿಧ ಭಾಗಗಳಿಂದ ಆಗಮಿಸಿದ್ದ ಮುಖಂಡರು ಹಾಗೂ ಹೋರಾಟಗಾರರು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಪ್ರಸಾದ ಹೆಗಡೆ, ಉಮೇಶ ಭಾಗ್ವತ ಕಳಚೆ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ರಾಘವೇಂದ್ರ ಭಟ್ಟ ಹಾಸಣಗಿ, ಅಪ್ಪು ಆಚಾರಿ, ಭಾಸ್ಕರ ಸಿದ್ದಿ ಕಂಪ್ಲಿ, ವೆಂಕಟ್ರಮಣ ಕಿರಕುಂಭತ್ತಿ, ಎಂ.ಕೆ. ಭಟ್ಟ ಯಡಳ್ಳಿ, ವಿಶ್ವನಾಥ ಬಾವಣಕೊಪ್ಪ, ಜಾನು ಘಾಡಿ, ಅನಂತ ಗಾಂವ್ಕಾರ್ ಕಂಚೀಪಾಲ್, ಮಹೇಶ ಕುಣಬಿ, ಗಣೇಶ ಕುಣಬಿ ಕೈಗಡಿ, ಶಶಾಂಕ ಹೆಗಡೆ, ಕೆ.ಟಿ. ಹೆಗಡೆ, ಕಾವೇರಿ ಭಾಗ್ವತ್, ಗಣಪತಿ ಬೋಳಗುಡ್ಡೆ, ನಾಗರಾಜ ಸಿದ್ದಿ, ವಿಶ್ವನಾಥ ಹಳೆಮನೆ, ರಘುಪತಿ ಕಂಪ್ಲಿ, ಮಂಜುನಾಥ ಆಚಾರಿ, ಕೆ.ಟಿ. ಹೆಗಡೆ ಚಿಕ್ಕೊರಗಿ, ವಿಘ್ನೇಶ್ವರ ಕಟ್ಟೆಗದ್ದೆ, ವೆಂಕಟ್ರಮಣ ಬೆಳ್ಳಿ ಹಾಗೂ ಕೊಳ್ಳ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *