ಯಲ್ಲಾಪುರ: ಸಂಘಟನೆ ಸದೃಢವಾದಷ್ಟೂ ಸಮಾಜದ ಸಮಸ್ಯೆಗಳು ಹಾಗೂ ಬೇಡಿಕೆಗಳಿಗೆ ಪರಿಣಾಮಕಾರಿ ಧ್ವನಿ ದೊರೆಯಲಿದೆ ಎಂಬ ಉದ್ದೇಶದಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ವತಿಯಿಂದ ಜಿಲ್ಲೆಯಾದ್ಯಂತ ಸಂಘಟನಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಯುವ ಸಬಲೀಕರಣ, ಮಹಿಳಾ ಸಬಲೀಕರಣ, ಕೃಷಿ, ಸಹಕಾರ, ಉದ್ಯೋಗ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಬಾಂಧವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಯುವ, ಮಹಿಳಾ ಹಾಗೂ ರೈತ-ಸಹಕಾರಿ ಘಟಕಗಳ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರ ಮಠ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಘಟಕಗಳ ರಚನೆಗೆ ಸಂಬಂಧಿಸಿದ ಪ್ರಾಥಮಿಕ ಪ್ರಕ್ರಿಯೆಗಳು ಆರಂಭವಾಗಿದ್ದು, ಈಗಾಗಲೇ ಜಿಲ್ಲಾ ಉಪಾಧ್ಯಕ್ಷರು ಹಾಗೂ ಆಯಾ ತಾಲೂಕು ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಅರ್ಹ ಹಾಗೂ ಕ್ರಿಯಾಶೀಲ ಸಮಾಜಬಾಂಧವರನ್ನು ಗುರುತಿಸಿ ಶಿಫಾರಸು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಯುವ ಘಟಕಕ್ಕೆ 40 ವರ್ಷಗಳೊಳಗಿನ ಸಮಾಜಮುಖಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಕ್ರಿಯಾಶೀಲ ಯುವಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಮಹಿಳಾ ಘಟಕಕ್ಕೆ ಸಮಾಜಸೇವೆ ಹಾಗೂ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಸಕ್ತಿ ಹೊಂದಿರುವ ಮಹಿಳೆಯರನ್ನು ಪರಿಗಣಿಸಲಾಗುತ್ತದೆ.
ಅದೇ ರೀತಿ ರೈತ-ಸಹಕಾರಿ ಘಟಕಕ್ಕೆ ಕೃಷಿ, ರೈತ ಸಂಘಟನೆ, ಸಹಕಾರ ಕ್ಷೇತ್ರ ಹಾಗೂ ಗ್ರಾಮೀಣ ಆರ್ಥಿಕ ಚಟುವಟಿಕೆಗಳಲ್ಲಿ ಆಸಕ್ತಿ ಅಥವಾ ಅನುಭವ ಹೊಂದಿರುವ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ ವೀರಶೈವ ಲಿಂಗಾಯತ ಸಮಾಜದವರನ್ನು ಗುರುತಿಸಲಾಗುತ್ತದೆ.
ಆಸಕ್ತರು ತಮ್ಮ ತಾಲೂಕು ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಅಥವಾ ಸಂಬಂಧಪಟ್ಟ ಪದಾಧಿಕಾರಿಗಳನ್ನು ಸಂಪರ್ಕಿಸಿ ಸೆಪ್ಟೆಂಬರ್ 26ರೊಳಗೆ ತಮ್ಮ ಆಸಕ್ತಿಯನ್ನು ತಿಳಿಸಬೇಕು ಎಂದು ಶಿವಲಿಂಗಯ್ಯ ಅಲ್ಲಯ್ಯನವರ ಮಠ ಮನವಿ ಮಾಡಿದ್ದಾರೆ.
ಅಭ್ಯರ್ಥಿಗಳ ಅರ್ಹತೆ, ಸಂಘಟನಾ ಚಟುವಟಿಕೆಗಳಲ್ಲಿ ಅವರ ಕ್ರಿಯಾಶೀಲತೆ, ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯ ಹಾಗೂ ಆಯಾ ಪ್ರದೇಶದ ಸ್ಥಳೀಯ ಸಂಘಟನಾ ಅಗತ್ಯಗಳನ್ನು ಪರಿಗಣಿಸಿ ಶಿಫಾರಸು ಅಥವಾ ನಾಮನಿರ್ದೇಶನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.















Leave a Reply