ನಮ್ಮ ಮನೆ–ನಮ್ಮ ಹಕ್ಕು ಜನಾಂದೋಲನ: ಸಮಸ್ಯೆ ಪರಿಹಾರಕ್ಕೆ ಆಗ್ರಹ

ಯಲ್ಲಾಪುರ: ಸರಕಾರದ ವಿವಿಧ ಸುತ್ತೋಲೆಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ‘ನಮ್ಮ ಮನೆ–ನಮ್ಮ ಹಕ್ಕು’ ಜನಾಂದೋಲನವನ್ನು ಆನಗೋಡ ಹಾಗೂ ದೇಹಳ್ಳಿ ಗ್ರಾಮ ಪಂಚಾಯಿತಿ ಎದುರು ಬುಧವಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ್ ಹೆಗಡೆ, ಕ್ಷೇತ್ರದ ಬಹುಸಂಖ್ಯಾತ ಜನರು ಸರಕಾರದ ಪ್ರಸ್ತುತ ಆದೇಶಗಳಿಂದ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಶಾಸಕರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅಲ್ಲಿಗೆ ಸೀಮಿತಗೊಳಿಸಿರುವುದು ಸಮರ್ಪಕವಲ್ಲ ಎಂದು ಟೀಕಿಸಿದರು.

ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ರಾಜೀನಾಮೆ ನೀಡುವುದಾಗಿ ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್ ಕೆ ಪಾಟೀಲ್ ಹೇಳಿದ್ದನ್ನು ಉಲ್ಲೇಖಿಸಿದ ಅವರು, ಜನರ ಮನೆ, ಜಮೀನು ಹಾಗೂ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಇದೇ ರೀತಿಯ ಬದ್ಧತೆಯನ್ನು ಶಾಸಕರು ತೋರಬೇಕಿತ್ತು ಎಂದು ಹೇಳಿದರು. ಜನರ ಸಮಸ್ಯೆ ಪರಿಹಾರಕ್ಕಾಗಿ ಶಾಸಕರು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ರಾಜೀನಾಮೆ ನೀಡಲಿ ಆಗ್ರಹಿಸಿದರು.
ಹಿರಿಯ ಮುಖಂಡ ಉಮೇಶ್ ಭಾಗ್ವತ ಮಾತನಾಡಿ, ಅತಿಕ್ರಮಣದಾರರನ್ನು ತೆರವುಗೊಳಿಸುವ ಕ್ರಮಗಳಿಂದ ಅನೇಕ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ. ಈ ವಿಚಾರದಲ್ಲಿ ಕ್ಷೇತ್ರದ ಶಾಸಕರು ಜವಾಬ್ದಾರಿ ವಹಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡ ಗಣಪತಿ ಮಾನಿಗದ್ದೆ ಮಾತನಾಡಿ, ಸರಕಾರದ ವಿವಿಧ ಆದೇಶಗಳು ಜನಸಾಮಾನ್ಯರಿಗೆ ತೊಂದರೆ ಉಂಟುಮಾಡುತ್ತಿವೆ. ಗುಟ್ಕಾ ನಿಷೇಧ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಹೊರಬರುವ ಆದೇಶಗಳಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.
ದೇಹಳ್ಳಿಯಲ್ಲಿ ಮಾತನಾಡಿದ ಗಣಪತಿ ಮುದ್ದೇಪಾಲ, ಜನರ ಮೂಲಭೂತ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆ ಸ್ಪಂದಿಸಬೇಕಿದೆ. ಜನರ ಆಶೋತ್ತರಗಳನ್ನು ಪರಿಗಣಿಸಿ ಆಡಳಿತ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವನಾಥ ಹಳೇಮನೆ ಅವರು ಕಸ್ತೂರಿರಂಗನ್ ವರದಿ, ಗಾಂವಠಾಣ ಹಾಗೂ ಇ-ಸ್ವತ್ತು ಸೇರಿದಂತೆ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಪತಿ ಮುದ್ದೇಪಾಲ, ರಾಮಣ್ಣ ಚಿಕ್ಯಾನಮನೆ ಹಾಗೂ ರಾಮಕೃಷ್ಣ ಅಳ್ವಗದ್ದೆ ಮಾತನಾಡಿದರು.
ಸತ್ಯನಾರಾಯಣ ಹೆಗಡೆ, ಕೆ.ಟಿ. ಹೆಗಡೆ, ಗಣಪತಿ ಕೊಂಬೆ, ದತ್ತಣ್ಣ ಬೋಳಗುಡ್ಡೆ, ಕೀರ್ತಿರಾಜ ಕೋಟೆಮನೆ, ಮಹೇಶ ಕುಣಬಿ, ಕುಸುಮಾ ಸಿದ್ದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.















Leave a Reply