ಶಿರಸಿ: ಸಾರ್ವಜನಿಕರ ಅನುಕೂಲಕ್ಕಾಗಿ ಶಿರಸಿ ಲಯನ್ಸ್ ಕ್ಲಬ್ ವತಿಯಿಂದ ಸೆ.20ರಂದು ನಗರದ ಲಯನ್ಸ್ ಸಭಾಭವನದಲ್ಲಿ ಬೃಹತ್ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಮನೋಹರ ಮಲ್ಮನೆ ತಿಳಿಸಿದರು.
ನಗರದ ಲಯನ್ಸ್ ಸುವರ್ಣಸೌಧ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಇಂಟರ್ನ್ಯಾಷನಲ್, ಲಯನ್ಸ್ ಕ್ಲಬ್ ಶಿರಸಿ ಹಾಗೂ ಅಂಕೋಲಾದ ಸಂಗಮ ಸೇವಾ ಸಂಸ್ಥೆಯ ಆಶ್ರಯದಲ್ಲಿ, ಡಾ. ಭಾಸ್ಕರ ಸ್ವಾದಿ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.20ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಮಣಿಪಾಲದ ಕೆಎಂಸಿ ದಂತ ಮಹಾವಿದ್ಯಾಲಯದ ಸುಮಾರು 20 ತಜ್ಞ ವೈದ್ಯರ ತಂಡ ಭಾಗವಹಿಸಲಿದೆ. ನಗರದ ಲಯನ್ಸ್ ಸಭಾಭವನ ಹಾಗೂ ಲಯನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಆವರಣದಲ್ಲಿ ತಪಾಸಣೆ ಮತ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಶಿಬಿರದಲ್ಲಿ ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ, ವೈದ್ಯಕೀಯ ಸಲಹೆ, ಹುಳುಕಿನ ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು, ಹಲ್ಲುಗಳ ಸ್ವಚ್ಛತೆ ಹಾಗೂ ಅನಾರೋಗ್ಯಕರ ಹಲ್ಲುಗಳನ್ನು ಕೀಳುವ ಸೌಲಭ್ಯ ಲಭ್ಯವಿರಲಿದೆ. ಮಕ್ಕಳಿಗೂ ವಿಶೇಷ ದಂತ ತಪಾಸಣೆ ನಡೆಸಲಾಗುವುದು ಎಂದರು.
ಶಿಬಿರಾರ್ಥಿಗಳು ತಿಂಡಿ ತಿಂದು ಬರಬೇಕು. ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಈ ಹಿಂದೆ ತಪಾಸಣೆ ನಡೆಸಿದ ವೈದ್ಯರ ಸಲಹೆ ಚೀಟಿಗಳನ್ನು ಕಡ್ಡಾಯವಾಗಿ ತರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಳೆದ ವರ್ಷ ನಡೆದ ಶಿಬಿರದಲ್ಲಿ 425 ಜನರು ಪ್ರಯೋಜನ ಪಡೆದಿದ್ದು, ಈ ಬಾರಿ 500 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ ಮಲ್ಮನೆ (9449992354) ಅಥವಾ ಆರೋಗ್ಯ ಶಿಬಿರದ ಸಂಯೋಜಕ ಶ್ರೀಧರ ಹೆಗಡೆ ಹಲಸರಿಗೆ (9019585398) ಅವರನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಭಾಸ್ಕರ ಸ್ವಾದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಸ್ವಾದಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಸವರಾಜ ಚಕ್ರಸಾಲಿ, ಖಜಾಂಚಿ ಶಂಕರ ಹೆಗಡೆ ಭದ್ರನ್, ಆರೋಗ್ಯ ಶಿಬಿರದ ಸಂಯೋಜಕ ಶ್ರೀಧರ ಹೆಗಡೆ ಹಲಸರಿಗೆ, ನಿಕಟಪೂರ್ವ ಅಧ್ಯಕ್ಷ ಗುರುರಾಜ ಹೊನ್ನಾವರ, ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ಎಸ್. ಹೆಗಡೆ ಹಲ್ಲುಸರಿಗೆ ಮತ್ತಿತರರು ಉಪಸ್ಥಿತರಿದ್ದರು.
“ಮಣಿಪಾಲದ ಕೆಎಂಸಿ ದಂತ ಮಹಾವಿದ್ಯಾಲಯದ ಸುಮಾರು 20 ತಜ್ಞ ವೈದ್ಯರು ಶಿಬಿರದಲ್ಲಿ ತಪಾಸಣೆ ನಡೆಸಲಿದ್ದಾರೆ. ಕಳೆದ ವರ್ಷ 425 ಜನರು ಶಿಬಿರದ ಪ್ರಯೋಜನ ಪಡೆದಿದ್ದರು. ಈ ಬಾರಿ 500 ಜನರು ಭಾಗವಹಿಸುವ ನಿರೀಕ್ಷೆ ಹೊಂದಿದ್ದೇವೆ.”
–ಮನೋಹರ ಮಲ್ಮನೆ, ಲಯನ್ಸ್ ಕ್ಲಬ್ ಅಧ್ಯಕ್ಷ















Leave a Reply