
ವಿಶೇಷ ವರದಿ : ಧವಳೋ ಗಣೇಶ ಸಾವರ್ಕರ್ ಗುಂದ
ಜೋಯಿಡಾ:
ದಟ್ಟವಾದ ಅರಣ್ಯ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಹಸಿರ ರಾಶಿ, ನಡುವೆ ಝುಳುಝುಳು ಹರಿಯುವ ನದಿ—ಇದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ‘ಸಿಂಥೇರಿ ರಾಕ್ಸ್’ (Syntheri Rocks) ನ ಮನಮೋಹಕ ಚಿತ್ರಣ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಈ ಸುಂದರ ತಾಣವು, ಒಮ್ಮೆ ಬಂದು ನೋಡಿದರೆ ಮತ್ತೆ ಮತ್ತೆ ಬರಬೇಕೆನಿಸುವಷ್ಟು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.
ವಿವಿಧ ಮಾರ್ಗಗಳ ಸಂಪರ್ಕ:
ಮುಖ್ಯ ರಸ್ತೆಯಿಂದ ಕೇವಲ ೨ ಕಿ.ಮೀ ದೂರದಲ್ಲಿರುವ ಅವುರ್ಲಿ ಗ್ರಾಮದ ಬಳಿ ಈ ಅಪರೂಪದ ಪ್ರವಾಸಿ ತಾಣವಿದೆ. ದಾಂಡೇಲಿಯಿಂದ ಪೋಟೋಲಿ ಮಾರ್ಗವಾಗಿ ಬರುವವರಿಗೆ ಇದು ೨೫ ಕಿ.ಮೀ ಹಾಗೂ ತಾಲೂಕು ಕೇಂದ್ರ ಜೋಯಿಡಾದಿಂದ ಹುಡಸಾ ಮಾರ್ಗವಾಗಿ ಬರುವವರಿಗೆ ಕೇವಲ ೧೫ ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಕಾರವಾರ-ಉಳವಿ-ಗುಂದ ಮಾರ್ಗವಾಗಿ ಅಥವಾ ಯಲ್ಲಾಪುರ-ಭಾಗವತಿ-ಕುಳಗಿ-ಪೋಟೋಲಿ ಮಾರ್ಗವಾಗಿಯೂ ಈ ಜಲಪಾತ ಮತ್ತು ಬಂಡೆಗಳ ಸೌಂದರ್ಯವನ್ನು ಸವಿಯಲು ಆಗಮಿಸಬಹುದಾಗಿದೆ.
ಅಚ್ಚುಕಟ್ಟಾದ ನಿರ್ವಹಣೆ – ರಾಜ್ಯ ಮಟ್ಟದ ಪುರಸ್ಕಾರದ ಗರಿ:
ಅರಣ್ಯ ಇಲಾಖೆ ಹಾಗೂ ಸ್ಥಳೀಯ ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿಯ (EDC) ಜಂಟಿ ಆಶ್ರಯದಲ್ಲಿ ಇಲ್ಲಿನ ಸಂಪೂರ್ಣ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಪ್ರವಾಸಿಗರ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಇಲ್ಲಿ ನಿಗದಿತ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀಕೃಷ್ಣ ವೇಳಿಪ ಅವರ ಅವಧಿಯಲ್ಲಿ ಈ ಸಮಿತಿಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಂದ ‘ಉತ್ತಮ ಇಡಿಸಿ’ ಎಂಬ ಪ್ರತಿಷ್ಠಿತ ಪುರಸ್ಕಾರವೂ ಲಭಿಸಿದೆ. ಸದ್ಯ ಉತ್ಸಾಹಿ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ ಅವುರ್ಲಿ ಅವರ ನೇತೃತ್ವದ ಸಮಿತಿ, ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಇಡಿಸಿ ಕಾರ್ಯದರ್ಶಿ ಶಾಂತಾರಾಮ ಮತ್ತು ಅರಣ್ಯ ರಕ್ಷಕ ರೇವಣಸಿದ್ದ ಕೆ. ಹಾಗೂ ಸಿಬ್ಬಂದಿಗಳ ಜೊತೆಗೂಡಿ ಪ್ರತಿವರ್ಷ ಅನೇಕ ಸಾಮಾಜಿಕ ಮತ್ತು ಪರಿಸರ ಕಾಳಜಿಯ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರವಾಸಿಗರಿಗೆ ಸೌಲಭ್ಯಗಳು:
ಪ್ರಕೃತಿಯ ಸೌಂದರ್ಯವನ್ನು ಯಾವುದೇ ತೊಂದರೆಯಿಲ್ಲದೆ ಸವಿಯಲು ಅರಣ್ಯ ಇಲಾಖೆಯು ಇಲ್ಲಿ ಸುಂದರವಾದ ಮೆಟ್ಟಿಲುಗಳು ಹಾಗೂ ವಿಶ್ರಾಂತಿ ಪಡೆಯಲು ಪ್ಯಾರಾಗೋಲಗಳನ್ನು (ನೆರಳಿನ ಆಸರೆ) ನಿರ್ಮಿಸಿದೆ. ದೂರದ ಊರುಗಳಿಂದ ಬರುವ ಪ್ರವಾಸಿಗರ ಹಸಿವು ನೀಗಿಸಲು ಸ್ಥಳೀಯರು ನಡೆಸುತ್ತಿರುವ ಉತ್ತಮ ಕ್ಯಾಂಟೀನ್ ವ್ಯವಸ್ಥೆಯೂ ಇಲ್ಲಿದೆ.
ಪರಿಸರ ಕೆಡಿಸಬೇಡಿ, ಪ್ರಾಣಕ್ಕೆ ಅಪಾಯ ತಂದುಕೊಳ್ಳಬೇಡಿ!
ಸಿಂಥೇರಿ ರಾಕ್ಸ್ ಎಷ್ಟು ಸುಂದರವೋ, ಅಷ್ಟೇ ಅಪಾಯಕಾರಿ ಎಂಬುದನ್ನು ಪ್ರವಾಸಿಗರು ಮರೆಯಬಾರದು. ಇಲ್ಲಿನ ನೀರಿನಲ್ಲಿ ಅಪಾಯಕಾರಿ ಸುಳಿಗಳು ಹಾಗೂ ಕೋರಕಲುಗಳಿದ್ದು, ಈ ಹಿಂದೆ ಪ್ರಾಣಹಾನಿ ಸಂಭವಿಸಿರುವ ಉದಾಹರಣೆಗಳಿವೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ನೀರಿನಲ್ಲಿ ಈಜಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅರಣ್ಯ ಇಲಾಖೆಯ ವಾಚರ್ಗಳು ಪ್ರವಾಸಿಗರ ಭದ್ರತೆಗಾಗಿ ಸದಾ ನಿಗಾ ಇಟ್ಟಿರುತ್ತಾರೆ.
ಪ್ಲಾಸ್ಟಿಕ್ ಮುಕ್ತ ವಲಯವನ್ನು ಕಾಪಾಡುವುದು, ಕರ್ಕಶ ಶಬ್ದ ಮಾಡದಿರುವುದು, ಧೂಮಪಾನ ಮಾಡದೆ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ಪ್ರವಾಸಿಗನ ಕರ್ತವ್ಯವಾಗಿದೆ. ಜೀವಕ್ಕೆ ಹಾನಿ ಮಾಡಿಕೊಳ್ಳದೆ, ನಿಯಮಗಳನ್ನು ಪಾಲಿಸಿ ನಿಸರ್ಗದ ಸೌಂದರ್ಯವನ್ನು ಸವಿಯಬೇಕೆಂದು ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿ ಹಾಗೂ ಅರಣ್ಯ ಇಲಾಖೆಯು ಪ್ರವಾಸಿಗರಲ್ಲಿ ಕಳಕಳಿಯ ಮನವಿ ಮಾಡಿದೆ.










Leave a Reply