ಹೊಂಡಕ್ಕೆ ಮಣ್ಣು, ಸಮಸ್ಯೆಗೆ ತೇಪೆ! 

ಹಂಚಿಕೊಳ್ಳಿ

ಶಿರಸಿ: ರಾಜ್ಯ ಹೆದ್ದಾರಿಗಳಲ್ಲಿ ನಿರ್ಮಾಣಗೊಂಡಿರುವ ಹೊಂಡ-ಗುಂಡಿಗಳನ್ನು ಡಾಂಬರ್‌ ಹಾಕಿ ಶಾಶ್ವತವಾಗಿ ದುರಸ್ತಿ ಮಾಡುವ ಬದಲು ಮಣ್ಣು ತುಂಬಿ ತಾತ್ಕಾಲಿಕವಾಗಿ ಮುಚ್ಚುವ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿರುವುದು ವಾಹನ ಸವಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡದ ಮೊದಲ ರಾಜಧಾನಿ, ರಾಜ್ಯ ಪ್ರಸಿದ್ಧ ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ತೆರಳುವ ಶಿರಸಿ-ಬನವಾಸಿ ರಸ್ತೆ, ಉತ್ತರಕರ್ನಾಟಕದಿಂದ ಮಲೆನಾಡು ಮತ್ತು ಕರಾವಳಿ ಸಂಪರ್ಕಿಸುವ ಶಿರಸಿ-ಹುಬ್ಬಳ್ಳಿ ರಸ್ತೆ, ಧಾರ್ಮಿಕ ಕ್ಷೇತ್ರ ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಮಳೆಗಾಲ ಆರಂಭವಾದ ಬಳಿಕ ಬಹುತೇಕ ಕಡೆಗಳಲ್ಲಿ ರಸ್ತೆ ಹದಗೆಟ್ಟಿದ್ದು, ನಿರಂತರ ಮಳೆ ಹಾಗೂ ವಾಹನಗಳ ಸಂಚಾರದಿಂದಾಗಿ ಸಣ್ಣಪುಟ್ಟ ಗುಂಡಿಗಳು ದೊಡ್ಡ ಹೊಂಡಗಳಾಗಿ ಮಾರ್ಪಟ್ಟಿವೆ. ಕೆಲವು ಕಡೆ ರಸ್ತೆಯ ಡಾಂಬರು ಕಿತ್ತುಹೋಗಿದ್ದು, ರಸ್ತೆಯ ಮೇಲ್ಮೈ ಅಸಮತಟ್ಟಾಗಿದೆ. ಇದರಿಂದ ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಹೊಂಡ-ಗುಂಡಿಗಳಲ್ಲಿ ಮಳೆ ನೀರು ನಿಂತುಕೊಳ್ಳುತ್ತಿರುವುದರಿಂದ ಅವುಗಳ ಆಳ ತಿಳಿಯದೆ ವಾಹನಸವಾರರು ಅಪಾಯಕ್ಕೆ ಸಿಲುಕುವಂತಾಗಿದೆ. ರಾತ್ರಿ ವೇಳೆ ಹಾಗೂ ಮಳೆಯ ಸುರಿಯುತ್ತಿರುವಾಗ ಹೊಂಡಗಳು ಗೋಚರಿಸದೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ನಿತ್ಯ ಸಂಚಾರ ಮಾಡುವ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಮಣ್ಣು ತುಂಬಿದರೂ ಸಮಸ್ಯೆ ಪರಿಹಾರವಾಗಿಲ್ಲ:

ರಸ್ತೆಯ ಹೊಂಡ-ಗುಂಡಿಗಳನ್ನು ಮುಚ್ಚಲು ಡಾಂಬರ್‌ ಅಥವಾ ಸಿಮೆಂಟ್‌ ಬಳಸುವ ಬದಲು ಮಣ್ಣು ಹಾಕಿ ಪದಾರ್ಥಗಳನ್ನು ತುಂಬಲಾಗುತ್ತಿದೆ. ಮಳೆಗಾಲದಲ್ಲಿ ಮಣ್ಣು ನೀರಿನಲ್ಲಿ ಕೊಚ್ಚಿಹೋಗುವುದರಿಂದ ಕೆಲವೇ ದಿನಗಳಲ್ಲಿ ಹೊಂಡಗಳು ಮತ್ತೆ ಹೊಂಡ-ಗುಂಡಿಗಳು ನಿರ್ಮಾಣಗೊಳ್ಳುತ್ತವೆ. ಈ ರೀತಿಯ ತಾತ್ಕಾಲಿಕ ಕ್ರಮದಿಂದ ಸಾರ್ವಜನಿಕರ ಹಣವೂ ವ್ಯರ್ಥವಾಗುವುದರ ಜತೆಗೆ, ರಸ್ತೆಯ ಸ್ಥಿತಿಯೂ ಮತ್ತಷ್ಟು ಹದಗೆಡುತ್ತದೆ. ಹೊಂಡಕ್ಕೆ ಮಣ್ಣು ತುಂಬಿದ ಬಳಿಕ ವಾಹನಗಳ ಸಂಚಾರದಿಂದ ಮಣ್ಣು ರಸ್ತೆಯ ಮೇಲೆ ಹರಡಿ ಕೆಸರು ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಜಾರುವ ಅಪಾಯವೂ ಎದುರಾಗುತ್ತಿದೆ.

ರಾಜ್ಯ ಹೆದ್ದಾರಿಗಳ ನಿರ್ವಹಣೆ ಹಾಗೂ ದುರಸ್ತಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಹೊಂಡ-ಗುಂಡಿಗಳ ಪ್ರಮಾಣವನ್ನು ಗುರುತಿಸಿ ಡಾಂಬರ್‌ ಹಾಕಿ ವೈಜ್ಞಾನಿಕ ರೀತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಕೇವಲ ಮಣ್ಣು ತುಂಬಿ ಸಮಸ್ಯೆಯನ್ನು ಮುಂದೂಡುವ ಬದಲು ಮಳೆಗಾಲ ಮುಗಿಯುವವರೆಗೆ ರಸ್ತೆ ಮತ್ತಷ್ಟು ಹದಗೆಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಪರಿಸ್ಥಿತಿ ಪರಿಶೀಲಿಸಿ, ತಾತ್ಕಾಲಿಕ ಮಣ್ಣಿನ ಕಾಮಗಾರಿಯ ಬದಲಾಗಿ ಶಾಶ್ವತ ದುರಸ್ತಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಾರ್ವಜನಿಕರು ಹಾಗೂ ವಾಹನಸವಾರರನ್ನು ಸಂಘಟಿಸಿಕೊಂಡು ಹೋರಾಟ ನಡೆಸಲಾಗುವುದು ಎಂದು ಸುಧೀರ ಪಟಗಾರ ಎಚ್ಚರಿಸಿದ್ದಾರೆ.

ರಸ್ತೆಗಳ ಹೊಂಡ-ಗುಂಡಿಗೆ ಡಾಂಬರ್‌ ಹಾಕುವ ಬದಲು ಲೋಕೋಪಯೋಗಿ ಇಲಾಖೆಯು ಮಣ್ಣನ್ನು ತುಂಬಿ ಇನ್ನಷ್ಟು ತೊಂದರೆ ಮಾಡಿದ್ದಾರೆ. ಇದರಿಂದ ವಾಹನಸವಾರರು ಮತ್ತಷ್ಟು ಕಷ್ಟ ಅನುಭವಿಸುವಂತಾಗಿದೆ. ಶೀಘ್ರದಲ್ಲಿ ರಸ್ತೆ ಹೊಂಡಗಳನ್ನು ತುಂಬಿ ಸರಿಪಡಿಸದಿದ್ದಲ್ಲಿ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ. 

  –ಪ್ರಕಾಶ ಹೆಗಡೆ, ಭೈರುಂಬೆ ಗ್ರಾಪಂ ಮಾಜಿ ಅಧ್ಯಕ್ಷ

ನಗರದ ಹಲವು ರಸ್ತೆಗಳು ಹೊಂಡ-ಗುಂಡಿಗಳಿಂದ ಕೂಡಿದ್ದು, ವಿಶೇಷವಾಗಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿರುವ ಹೊಂಡಗಳಿಗೆ ಕೇವಲ ಮಣ್ಣು ತುಂಬಿದರೆ, ಮಳೆ ಬಂದ ಸಂದರ್ಭದಲ್ಲಿ ಮಣ್ಣು ಕೊಚ್ಚಿಹೋಗಿ ಮತ್ತೆ ಹೊಂಡಗಳು ನಿರ್ಮಾಣವಾಗಲಿವೆ. ಇದರಿಂದ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ನಗರಸಭೆಯು ಈ ಬಗ್ಗೆ ತಕ್ಷಣ ಗಮನಹರಿಸಿ, ಹೊಂಡ-ಗುಂಡಿಗಳನ್ನು ಕ್ರಷರ್‌ ಪೌಡರ್‌ ಮಿಶ್ರಿತ ಸಿಮೆಂಟ್‌ ಬಳಸಿ ಸಮರ್ಪಕವಾಗಿ ದುರಸ್ತಿ ಮಾಡಬೇಕು. ಗಣೇಶೋತ್ಸವಕ್ಕೂ ಮುನ್ನವೇ ರಸ್ತೆಗಳನ್ನು ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *