ಸಾವಿರಾರು ಜನರಿಗೆ ‘ಅಹಿಂಸಾತ್ಮಕ’ ಜೇನು ಕೃಷಿ ಕಲಿಸಿದ ಬೆಳಸೂರಿನ ಭಗೀರಥ!    ಪ್ರತಿಯೊಬ್ಬ ಕೃಷಿಕನೂ ನೋಡಬೇಕಾದ ವರದಿ

ಹಂಚಿಕೊಳ್ಳಿ

ಯಲ್ಲಾಪುರ (ಉತ್ತರ ಕನ್ನಡ): ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಜೇನುನೊಣಗಳ ಸಂತತಿಯನ್ನು ಉಳಿಸಿ, ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಜೇನು ಕೃಷಿಕ ಹಾಗೂ ತರಬೇತುದಾರ ರಾಮಚಂದ್ರ ಗೋಪಾಲ ಭಟ್ ತಿಳಿಸಿದ್ದಾರೆ.

ಆರ್ ಜಿ ಭಟ್ ಬೆಳಸೂರು ಹಾಗೂ ಕೃಷಿಕ , ಕಲಾವಿದ ಮಂಜಣ್ಣ ಮೂಲೆಮನೆಯವರೊಂದಿಗೆ

ತಾಲ್ಲೂಕಿನ ಚಂದಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಸೂರು ಗ್ರಾಮದ ನಿವಾಸಿಯಾದ ಇವರು, ಜೇನು ಸಂತತಿ ರಕ್ಷಣೆಯಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ನವದೆಹಲಿಯ ಭಾರತೀಯ ಜೇನು ಮಂಡಳಿ ಹಾಗೂ ಕೈಗಾರಿಕಾ ಇಲಾಖೆಯಿಂದ ವೈಜ್ಞಾನಿಕ ಹೆಜ್ಜೇನು ಕೊಯ್ಯುವ ತರಬೇತಿ ಪಡೆದಿರುವ ಇವರು, ರಾಜ್ಯಾದ್ಯಂತ ಜೇನು ಕೃಷಿಯ ಜಾಗೃತಿ ಮೂಡಿಸುತ್ತಿದ್ದಾರೆ.

ಅಹಿಂಸಾತ್ಮಕ ಜೇನು ಕೃಷಿಗೆ ಆದ್ಯತೆ:
ಹೆಜ್ಜೇನು ಗೂಡುಗಳನ್ನು ಕೇವಲ ಜೇನುತುಪ್ಪಕ್ಕಾಗಿ ವಿಷದ ಹೊಗೆ ಹಾಕಿ ಕೊಲ್ಲುವುದು ಅಥವಾ ಬೆಂಕಿ ಹಾಕಿ ಸುಡುವುದು ತಪ್ಪು ಪದ್ಧತಿಯಾಗಿದೆ. ಕಟ್ಟಡ ಹಾಗೂ ಮರಗಳ ಮೇಲಿರುವ ಹೆಜ್ಜೇನುಗಳನ್ನು ಯಾವುದೇ ಹಾನಿ ಮಾಡದೇ ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ಜೇನು ಸಂತತಿಯನ್ನು ರಾಮಚಂದ್ರ ಭಟ್ ರಕ್ಷಿಸುತ್ತಿದ್ದಾರೆ. ಜೇನು ಗೂಡಿನಿಂದ ಜೇನುತುಪ್ಪ ತೆಗೆಯುವಾಗ ಕೇವಲ ಮುಖಕ್ಕೆ ಪರದೆಯನ್ನಷ್ಟೇ ಬಳಸುವ ಇವರು, ಯಾವುದೇ ಅಡ್ಡ ದಾರಿಗಳನ್ನು ಬಳಸುವುದಿಲ್ಲ.

ಸಾವಿರಾರು ಜನರಿಗೆ ವೈಜ್ಞಾನಿಕ ತರಬೇತಿ:
ಪ್ರಸ್ತುತ 62 ವರ್ಷದ ಪ್ರಾಯದಲ್ಲೂ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿರುವ ಇವರು, ಇದುವರೆಗೆ ರಾಜ್ಯದ ವಿವಿಧ ಭಾಗಗಳ ಸುಮಾರು 5 ಸಾವಿರಕ್ಕೂ ಹೆಚ್ಚು ಜನರಿಗೆ ಜೇನು ಸಾಕಣೆಯ ವೈಜ್ಞಾನಿಕ ತರಬೇತಿ ನೀಡಿದ್ದಾರೆ. ಧಾರವಾಡ, ಬೆಂಗಳೂರು, ದಾವಣಗೆರೆ ಹಾಗೂ ಕಾರವಾರ ಸೇರಿದಂತೆ ಹಲವೆಡೆ ಸಾವಿರಾರು ಜೇನುಗೂಡುಗಳನ್ನು ಸಂರಕ್ಷಿಸಿದ್ದಾರೆ. ಇವರ ಈ ಅಪೂರ್ವ ಸಾಧನೆಯು ಧಾರವಾಡ ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳು ಹಾಗೂ ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಜನಸಾಮಾನ್ಯರನ್ನು ತಲುಪಿದೆ.

ಕೃಷಿ ಇಳುವರಿ ಹೆಚ್ಚಳಕ್ಕೆ ಜೇನು ಸಹಕಾರಿ:
ದೇಶದಲ್ಲಿ ಜೇನುನೊಣಗಳ ಕೊರತೆ ಮತ್ತು ಪರಾಗಸ್ಪರ್ಶದ ಕೊರತೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ವಾರ್ಷಿಕ ಸುಮಾರು 4 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಜೇನು ಸಾಕುವುದರಿಂದ ಇಳುವರಿ ಹೆಚ್ಚುತ್ತದೆ. ಕೃಷಿಯಲ್ಲಿ ತೊಡಗಿರುವ ಯುವಕರು ಜೇನು ಸಾಕಣೆಯನ್ನು ಉಪಕಸುಬಾಗಿ ಸ್ವೀಕರಿಸಿದರೆ ಉತ್ತಮ ಆದಾಯ ಗಳಿಸಬಹುದು ಎಂದು ಈ ವರದಿಯಲ್ಲಿ ಆಶಯ ವ್ಯಕ್ತಪಡಿಸಲಾಗಿದೆ. ಮುಂದಿನ ಪೀಳಿಗೆಗೆ ಜೇನಿನ ಮಹತ್ವವನ್ನು ದಾಟಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಮಚಂದ್ರ ಭಟ್ ತಿಳಿಸಿದ್ದಾರೆ.

ಮಾಹಿತಿ: ಪತ್ರಕರ್ತ ವಿಶ್ವೇಶ್ವರ ಗಾಂವ್ಕರ್ ಯಲ್ಲಾಪುರ ಇವರ ವರದಿಯಿಂದ ಪಡೆದದ್ದು .. ಧನ್ಯವಾದಗಳು

Leave a Reply

Your email address will not be published. Required fields are marked *