ಯಲ್ಲಾಪುರ-ಮುಂಡಗೋಡು THO ಡಾ. ನರೇಂದ್ರ ಪವಾರ್ ಕೈಯಲ್ಲಿ ಅರಳಿದ ಮಣ್ಣಿನ ಗಣಪತಿ: ಕರ್ತವ್ಯ ನಿಷ್ಠೆಯ ಜೊತೆ ಪರಿಸರ ಕಾಳಜಿಯ ಅನಾವರಣ! ಓದಿ ಈ ವರದಿ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನಲ್ಲಿ ತಮ್ಮ ದಕ್ಷ ಮತ್ತು ಪ್ರಾಮಾಣಿಕ ಸೇವೆಯ ಮೂಲಕ ಸಾರ್ವಜನಿಕರ ಮನಗೆದ್ದಿರುವ ಯಲ್ಲಾಪುರ ಹಾಗೂ ಮುಂಡಗೋಡು ತಾಲೂಕಾ ಆರೋಗ್ಯಾಧಿಕಾರಿ (ಟಿಎಚ್‌ಒ) ಡಾ. ನರೇಂದ್ರ ಪವಾರ್ ಅವರು ಈ ಬಾರಿ ಕೇವಲ ತಮ್ಮ ಕರ್ತವ್ಯದ ಮೂಲಕ ಮಾತ್ರವಲ್ಲದೆ, ತಮ್ಮೊಳಗಿನ ಅದ್ಭುತ ಕಲಾ ನೈಪುಣ್ಯತೆಯ ಮೂಲಕವೂ ಎಲ್ಲರ ಗಮನ ಸೆಳೆದಿದ್ದಾರೆ. ಹಬ್ಬದ ಸಂಭ್ರಮದಲ್ಲಿ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ತಾವೇ ಸ್ವತಃ ಪರಿಸರಸ್ನೇಹಿ ಮಣ್ಣಿನ ಗಣಪತಿಯನ್ನು ಸೃಷ್ಟಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.


ಆರೋಗ್ಯ ಇಲಾಖೆಯ ಜವಾಬ್ದಾರಿಯುತ ಹುದ್ದೆಯಲ್ಲಿರುವ ಡಾ. ನರೇಂದ್ರ ಪವಾರ್ ಅವರಿಗೆ ನಿತ್ಯವೂ ನೂರಾರು ಸವಾಲುಗಳು ಇರುತ್ತವೆ. ಯಲ್ಲಾಪುರ ಮತ್ತು ಮುಂಡಗೋಡು ಎರಡೂ ತಾಲೂಕುಗಳ ಆರೋಗ್ಯ ವ್ಯವಸ್ಥೆಯನ್ನು ನಿಭಾಯಿಸುವ ಅವರು, ಸಾರ್ವಜನಿಕ ವಲಯದಲ್ಲಿ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದಾರೆ. ದಿನವಿಡೀ  ಇಲಾಖೆಯ ಕೆಲಸಗಳಲ್ಲಿ ಬ್ಯುಸಿಯಾಗಿರುವ ಇವರು, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಣ್ಣಿನೊಂದಿಗೆ ಮಣ್ಣಾಗಿ ಅದ್ಭುತವಾದ ಗಣೇಶನ ಮೂರ್ತಿಯನ್ನು ಕೆತ್ತಿದ್ದಾರೆ. ಪ್ರಕೃತಿಯನ್ನು ಆರಾಧಿಸುವ ಅವರ ಈ ಕಲೆ ಮತ್ತು ಶ್ರದ್ಧೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಪರಿಸರ ಸಂರಕ್ಷಣೆಯ ದಿವ್ಯ ಸಂದೇಶ:
ಇತ್ತೀಚಿನ ದಿನಗಳಲ್ಲಿ ರಾಸಾಯನಿಕಯುಕ್ತ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣಪತಿ ಮೂರ್ತಿಗಳ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆಂಬ ಉದ್ದೇಶದಿಂದ ಡಾ. ನರೇಂದ್ರ ಪವಾರ್ ಅವರು ಶುದ್ಧ ಜೇಡಿಮಣ್ಣನ್ನು ಬಳಸಿ ಈ ಗಣಪತಿಯನ್ನು ತಾವೇ ರೂಪಿಸಿದ್ದಾರೆ. ಇಲಾಖೆಯ ಕೆಲಸದ ಒತ್ತಡದ ನಡುವೆಯೂ ರಾತ್ರಿ ವೇಳೆಯಲ್ಲಿ ಸಮಯ ಹೊಂದಿಸಿಕೊಂಡು ಮೂರ್ತಿ ತಯಾರು ಮಾಡಿದ್ದಾರೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ ನೈಸರ್ಗಿಕ ಸೊಬಗನ್ನು ಮೂರ್ತಿಗೆ ನೀಡಿದ್ದಾರೆ. ಅಧಿಕಾರಿಯೊಬ್ಬರು ತಾವೇ ಸ್ವತಃ ಮಣ್ಣಿನ ಗಣೇಶನನ್ನು ಮಾಡಿ ಪೂಜಿಸುತ್ತಿರುವುದು ಸಾರ್ವಜನಿಕರಿಗೆ ದೊಡ್ಡ ಪ್ರೇರಣೆಯಾಗಿದೆ.

ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ:
ಡಾ. ನರೇಂದ್ರ ಪವಾರ್ ಅವರು ಕೇವಲ ಕಚೇರಿ ಕೆಲಸಕ್ಕಷ್ಟೇ ಸೀಮಿತವಾಗದೆ, ಇಂತಹ ಸೃಜನಶೀಲ ಮತ್ತು ಪರಿಸರ ಕಾಳಜಿಯ ಕೆಲಸದಲ್ಲಿ ತೊಡಗಿರುವುದು ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. “ಜನರ ಆರೋಗ್ಯ ಕಾಪಾಡುವ ವೈದ್ಯರು, ಪ್ರಕೃತಿಯ ಆರೋಗ್ಯವನ್ನೂ ಹೇಗೆ ಕಾಪಾಡಬೇಕು ಎಂಬುದನ್ನು ತಮ್ಮ ಕೃತಿಯ ಮೂಲಕ ತೋರಿಸಿಕೊಟ್ಟಿದ್ದಾರೆ” ಎಂದು ಸ್ಥಳೀಯರು ಶ್ಲಾಘಿಸುತ್ತಿದ್ದಾರೆ.


Leave a Reply

Your email address will not be published. Required fields are marked *