ದಕ್ಷಿಣ ಭಾರತದ ‘ಗಾನ ಕೋಗಿಲೆ’ ಎಂದೇ ಖ್ಯಾತರಾಗಿದ್ದ ಹಿರಿಯ ಬಹುಭಾಷಾ ಗಾಯಕಿ ಎಸ್. ಜಾನಕಿ (88) ಅವರು ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಕಾಲಿನ ನೋವಿನ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 1.55 ರ ಸುಮಾರಿಗೆ ಎಸ್. ಜಾನಕಿ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಕಾಲಿನಲ್ಲಿ ಇನ್ಫೆಕ್ಷನ್ ಹೆಚ್ಚಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಸಂಜೆ ವೇಳೆಗೆ ಆರೋಗ್ಯದಲ್ಲಿ ಏರುಪೇರಾಗಿ ರಾತ್ರಿ 7.30ರ ಸುಮಾರಿಗೆ ದಿಢೀರ್ ಹೃದಯಾಘಾತದಿಂದ ಅವರು ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.
ತಮ್ಮ ಸುಮಧುರ ಕಂಠದಿಂದ ಕನ್ನಡಿಗರು ಸೇರಿದಂತೆ ಕೋಟ್ಯಂತರ ಸಂಗೀತ ಪ್ರೇಮಿಗಳನ್ನು ರಂಜಿಸಿದ್ದ ಜಾನಕಿ ಅವರು, ತಮ್ಮ ವೃತ್ತಿಜೀವನದಲ್ಲಿ ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಜೀವ ತುಂಬಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಗಾಯನ ಮಾಡಿರುವ ಅವರಿಗೆ, ಅತಿ ಹೆಚ್ಚು ಹಾಡುಗಳನ್ನು ಕನ್ನಡ ಭಾಷೆಯಲ್ಲಿಯೇ ಹಾಡಿರುವ ಹೆಗ್ಗಳಿಕೆಯಿದೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಂಬನಿ
ಮಹಾನ್ ಗಾಯಕಿಯ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಗಾನಕೋಗಿಲೆ, ಬಹುಭಾಷಾ ಗಾಯಕಿಯಾಗಿದ್ದ ಎಸ್. ಜಾನಕಿ ಅವರು ನಿಧನರಾದರು ಎಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ತಮ್ಮ ಮಧುರ ಕಂಠದಿಂದ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್ ಗಾಯಕಿ ಜಾನಕಿ ಅವರು. ಮೈಸೂರಿನಲ್ಲಿ ನೆಲೆಸಿದ್ದ ಅವರು ಕನ್ನಡಿಗರಿಗೆ ಬಹು ಅಚ್ಚುಮೆಚ್ಚಿನ ಗಾಯಕರಾಗಿದ್ದರು” ಎಂದು ಸ್ಮರಿಸಿದ್ದಾರೆ.
“ಅವರ ನಿಧನ ಗಾನಲೋಕದಲ್ಲಿ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಆದರೂ ಅವರು ಬಿಟ್ಟು ಹೋಗಿರುವ ಸಂಗೀತ ಸಂಪತ್ತು ಅಮರ, ಅಜರಾಮರ. ಆ ಗಾನ ಸರಸ್ವತಿಯ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರ ಬಂಧುಗಳು ಮತ್ತು ಅಭಿಮಾನಿ ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ” ಎಂದು ಅವರು ಕಂಬನಿ ಮಿಡಿದಿದ್ದಾರೆ.

Leave a Reply