ನಂದಿಗ್ರಾಮ್ ಎಕ್ಸ್‌ಪ್ರೆಸ್‌ನಲ್ಲಿ ಹನಿಮೂನ್ ಸೆಟಪ್: ರೈಲಿನ 1st AC ಬೋಗಿ ಸಿಂಗರಿಸಿದ್ದ ಜೋಡಿ, ಟಿಕೆಟ್ ಇನ್ಸ್‌ಪೆಕ್ಟರ್ ಅಮಾನತು!

ಹಂಚಿಕೊಳ್ಳಿ

ಜುಲೈ 6 ರಂದು ನಂದಿಗ್ರಾಮ್ ಎಕ್ಸ್‌ಪ್ರೆಸ್ (Train No. 11002) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನವಜೋಡಿಯೊಂದು ತಮ್ಮ ಫಸ್ಟ್ ಎಸಿ (1st AC) ಬೋಗಿಯನ್ನು ಹೂವುಗಳಿಂದ ಸಿಂಗರಿಸಿ ಹನಿಮೂನ್ ಸೆಟಪ್ ಮಾಡಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಜಲ್ನಾ ರೈಲು ನಿಲ್ದಾಣದಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ ಅನಧಿಕೃತವಾಗಿ ರೈಲು ಹತ್ತಿದ್ದ ಡೆಕೋರೇಟರ್, ದಂಪತಿಯ ಖಾಸಗಿ ಕೂಪ್‌ (Coupe) ಅನ್ನು ಹೂವು, ಹಾರಗಳು ಮತ್ತು ‘I Love You’ ಎಂಬ ಸಂದೇಶಗಳೊಂದಿಗೆ ಅಲಂಕರಿಸಿದ್ದ. 

ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಇದನ್ನು ‘ಸುಹಾಗ್‌ರಾತ್ ಎಕ್ಸ್‌ಪ್ರೆಸ್’ ಎಂದು ತಮಾಷೆ ಮಾಡಿದ್ದರು. ಇದರ ಬೆನ್ನಲ್ಲೇ ಕುಟುಂಬ ಸಮೇತ ಪ್ರಯಾಣಿಸುವ ರೈಲಿನಲ್ಲಿ ಇಂತಹ ವರ್ತನೆಗಳು ಎಷ್ಟು ಸರಿ ಎಂಬ ಕಳವಳ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯೂ ವ್ಯಕ್ತವಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಮಧ್ಯ ರೈಲ್ವೆ (South Central Railway) ವಿಭಾಗವು, ಭದ್ರತಾ ಲೋಪದ ಹಿನ್ನೆಲೆಯಲ್ಲಿ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ (Chief Ticket Inspector) ಅವರನ್ನು ಅಮಾನತುಗೊಳಿಸಿದೆ. ಅನಧಿಕೃತವಾಗಿ ರೈಲು ಹತ್ತಿ ಬೋಗಿ ಅಲಂಕರಿಸಿದ್ದ ಡೆಕೋರೇಟರ್ ವಿರುದ್ಧ ರೈಲ್ವೆ ಕಾಯ್ದೆಯಡಿ ಅತಿಕ್ರಮ ಪ್ರವೇಶದ ಪ್ರಕರಣ ದಾಖಲಿಸಲಾಗಿದೆ. “ಜುಲೈ 6, 2026 ರಂದು ರೈಲು ಸಂಖ್ಯೆ 11002 ರಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯು ತಮ್ಮ 1st AC ಕೂಪ್ ಅಲಂಕರಿಸಲು ಆನ್‌ಲೈನ್ ಮೂಲಕ ಡೆಕೋರೇಟರ್ ಅನ್ನು ಬುಕ್ ಮಾಡಿದ್ದರು. 

ಆತನ ಅನಧಿಕೃತ ಪ್ರವೇಶವನ್ನು ಗಂಭೀರ ಲೋಪವೆಂದು ಪರಿಗಣಿಸಲಾಗಿದ್ದು, ಸಂಬಂಧಪಟ್ಟ ಟಿಕೆಟ್ ತಪಾಸಕ ಸಿಬ್ಬಂದಿಯನ್ನು ಅಮಾನತು ಮಾಡಿ ವಿಸ್ತೃತ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ. ಪ್ರಯಾಣಿಕರ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

https://x.com/rajtoday/status/2074880084708868273

Leave a Reply

Your email address will not be published. Required fields are marked *

Advertisement


This will close in 3 seconds