Acting ಚಾನ್ಸ್ ಕೇಳಿ ಬಂದ ಯುವಕನಿಂದ ನಟನ ಮನೆಯಲ್ಲೇ ಚಿನ್ನ ಕಳ್ಳತನ: ಆರೋಪಿ ಅರೆಸ್ಟ್!

ಹಂಚಿಕೊಳ್ಳಿ

​’ಗರುಡಪುರಾಣ’ ಮತ್ತು ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳು ಹಾಗೂ ಹಲವು ಕಿರುಚಿತ್ರಗಳಲ್ಲಿ ನಟಿಸಿರುವ ಲಿಖಿತ್ ರಾಜ್ ಅವರ ಮನೆಯಲ್ಲಿಯೇ ಸಿನಿಮೀಯ ರೀತಿಯ ಕಳ್ಳತನ ನಡೆದಿದೆ. ಲಿಖಿತ್ ರಾಜ್ ಅವರು ‘ಫ್ಲಾಟ್ F01’ ಹೆಸರಿನ ಹೊಸ ಶಾರ್ಟ್ ಮೂವಿಯೊಂದನ್ನು ನಿರ್ದೇಶನ ಮಾಡುತ್ತಿದ್ದರು. ಈ ವೇಳೆ ಆ್ಯಕ್ಟಿಂಗ್ ಚಾನ್ಸ್ ಕೇಳಿಕೊಂಡು ಬಂದಿದ್ದ ಅಭಿಷೇಕ್ ಎಂಬಾತನಿಗೆ ಲಿಖಿತ್ ರಾಜ್ ಅವರು ತಮ್ಮ ಶಾರ್ಟ್ ಮೂವಿಯಲ್ಲಿ ಅಭಿನಯಿಸುವ ಅವಕಾಶವನ್ನೂ ನೀಡಿದ್ದರು. ಆದರೆ, ಚಿತ್ರರಂಗದಲ್ಲಿ ಬೆಳೆಯಲು ಅವಕಾಶ ಗಿಟ್ಟಿಸಿಕೊಂಡ ಈತ ನಟನ ಮನೆಯಲ್ಲೇ ಕೈಚಳಕ ತೋರಿ ಜೈಲು ಪಾಲಾಗಿದ್ದಾನೆ.

ದೇವರ ಮನೆಯಲ್ಲಿದ್ದ ಸರ ಕಳವು

​ಕಳೆದ ಜೂನ್ 28 ರಂದು ಸಹಕಾರನಗರದಲ್ಲಿರುವ ಲಿಖಿತ್ ರಾಜ್ ಅವರ ಫ್ಲಾಟ್‌ನಲ್ಲಿ ಶಾರ್ಟ್ ಮೂವಿ ಆರಂಭದ ಹಿನ್ನೆಲೆಯಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಅಲ್ಲದೆ, ಅದೇ ಫ್ಲಾಟ್‌ನಲ್ಲಿ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿತ್ತು. ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ಅಭಿಷೇಕ್, ಲಿಖಿತ್ ಅವರ ಮನೆಯ ದೇವರ ಕೋಣೆಯಲ್ಲಿದ್ದ ಚಿನ್ನದ ಸರವನ್ನು ಯಾರಿಗೂ ಗೊತ್ತಾಗದಂತೆ ಕಳವು ಮಾಡಿದ್ದ. ಸ್ವಲ್ಪ ಸಮಯದ ಬಳಿಕ ಚಿನ್ನದ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದ ತಕ್ಷಣ, ಲಿಖಿತ್ ರಾಜ್ ಅವರ ತಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ಒಂದೂವರೆ ಲಕ್ಷ ಮೌಲ್ಯದ ಚಿನ್ನ ವಶಕ್ಕೆ

​ಲಿಖಿತ್ ರಾಜ್ ಅವರ ತಾಯಿ ನೀಡಿದ ದೂರಿನನ್ವಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿ ಅಭಿಷೇಕ್‌ನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಈತನ ಹಿನ್ನೆಲೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds