ದರ್ಶನ್ ಪರ ಕ್ರಿಮಿನಲ್ ವಕೀಲ ಹಷ್ಮತ್ ಪಾಷಾ ಎಂಟ್ರಿ: ಸುಪ್ರೀಂ ಕೋರ್ಟ್‌ನಲ್ಲಿ ರಿವ್ಯೂ ಅರ್ಜಿ ಸಲ್ಲಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರ ಕುತೂಹಲ ಕೆರಳಿಸಿರುವ ಬೆನ್ನಲ್ಲೇ, ಪ್ರಕರಣದ ಎರಡನೇ ಆರೋಪಿಯಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ತಮ್ಮ ವಕೀಲರನ್ನು ಬದಲಾಯಿಸಿದ್ದಾರೆ. ಈ ಪ್ರಮುಖ ಬೆಳವಣಿಗೆಯ ಬೆನ್ನಲ್ಲೇ, ಪ್ರಕರಣದ ಒಟ್ಟು 60 ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸುವಂತೆ ಕೋರಿ ನೂತನ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ (Review Petition) ಅರ್ಜಿಯನ್ನು ಸಲ್ಲಿಸಲಾಗಿದೆ.

ನಟ ದರ್ಶನ್ ಪರ ಈವರೆಗೆ ವಾದ ಮಂಡಿಸುತ್ತಿದ್ದ ವಕೀಲ ಸುನಿಲ್ ಕುಮಾರ್ ಅವರು ಕೇಸ್‌ನಿಂದ ಅಧಿಕೃತವಾಗಿ ಹಿಂದೆ ಸರಿದಿದ್ದು, 59ನೇ ಸೆಷನ್ಸ್ ನ್ಯಾಯಾಲಯಕ್ಕೆ ಮೆಮೋ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಮಾತ್ರವಲ್ಲದೆ ಪ್ರಕರಣದ ಇತರ ಆರೋಪಿಗಳಾದ ಲಕ್ಷ್ಮಣ್ ಮತ್ತು ನಾಗರಾಜ್ ಅವರ ಪರ ವಕಾಲತ್ತಿನಿಂದಲೂ ತಾವು ಹಿಂದೆ ಸರಿಯುತ್ತಿರುವುದಾಗಿ ಅವರು ಕೋರ್ಟ್‌ಗೆ ತಿಳಿಸಿದ್ದಾರೆ. ಈ ವೇಳೆ ನ್ಯಾಯಾಲಯವು, ದರ್ಶನ್ ಪರವಾಗಿ ರಾಜ್ಯದ ಹೆಸರಾಂತ ಹಿರಿಯ ಕ್ರಿಮಿನಲ್ ವಕೀಲರಾದ ಹಷ್ಮತ್ ಪಾಷಾ ಅವರು ವಕಾಲತ್ತು ವಹಿಸಿಕೊಂಡಿದ್ದಾರೆ ಎಂಬ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ದಾಖಲೆಗಳನ್ನು ನೂತನ ವಕೀಲರಿಗೆ ತಕ್ಷಣವೇ ಹಸ್ತಾಂತರಿಸುವಂತೆ ನ್ಯಾಯಾಲಯವು ಸೂಚನೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಅವರ ಪರ ವಕೀಲರು, ಈಗಾಗಲೇ ಎಲ್ಲಾ ಪ್ರಮುಖ ದಾಖಲೆಗಳನ್ನು ದರ್ಶನ್ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಹೊಸ ವಕೀಲರ ಎಂಟ್ರಿಯಿಂದಾಗಿ ದರ್ಶನ್ ಅವರ ಕಾನೂನು ಹೋರಾಟಕ್ಕೆ ಹೊಸ ತಿರುವು ಸಿಕ್ಕಂತಾಗಿದ್ದು, ಸುಪ್ರೀಂ ಕೋರ್ಟ್ ಒಂದು ವರ್ಷದ ವಿಚಾರಣಾ ಅವಧಿಯನ್ನು ಮರುಪರಿಶೀಲಿಸಿ ಕಡಿಮೆ ಮಾಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *