ಕ್ರಾಸ್ Voting ಶಾಕ್: ಧರ್ಮಸ್ಥಳದಲ್ಲಿ BJP ಶಾಸಕರಿಗೆ ಆಣೆ-ಪ್ರಮಾಣದ ಅಗ್ನಿಪರೀಕ್ಷೆ!

ಹಂಚಿಕೊಳ್ಳಿ

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವಪಕ್ಷದ ಶಾಸಕರಿಂದಲೇ ಅಡ್ಡಮತದಾನ ನಡೆದಿರುವ ಹಿನ್ನೆಲೆಯಲ್ಲಿ, ದ್ರೋಹಿಗಳನ್ನು ಪತ್ತೆಹಚ್ಚಲು ರಾಜ್ಯ ಬಿಜೆಪಿ ನಾಯಕರು ದೇವರ ಮೊರೆ ಹೋಗಿದ್ದಾರೆ. ಶಾಸಕರಿಂದ ದೇವರ ಮುಂದೆ ಆಣೆ-ಪ್ರಮಾಣ ಮಾಡಿಸಲು ಬಿಜೆಪಿ ಮುಂದಾಗಿದ್ದು, ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿಯೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಾರದಲ್ಲಿಯೇ ಈ ಮಹತ್ವದ ಸಭೆ ನಡೆಯುವ ಸಾಧ್ಯತೆಯಿದ್ದು, ಅಡ್ಡ ಮತದಾನದ ಬಗ್ಗೆ ಶಾಸಕರಿಂದ ಆಣೆ ಮಾಡಿಸಿ ನಿಖರ ಮಾಹಿತಿ ಸಂಗ್ರಹಿಸಲು ವರಿಷ್ಠರು ಯೋಜನೆ ರೂಪಿಸಿದ್ದಾರೆ.

​ಎಲ್ಲ 63 ಶಾಸಕರ ಮೇಲೂ ಅನುಮಾನದ ತೂಗುಗತ್ತಿ

​ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ನಾಲ್ಕು ಅಡ್ಡ ಮತದಾನ ಆಗಿದೆ ಎಂಬ ಚರ್ಚೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರ ಈ ನಡವಳಿಕೆಯಿಂದ ತಳಮಟ್ಟದ ಕಾರ್ಯಕರ್ತರು ತೀವ್ರ ಬೇಸರಗೊಂಡಿದ್ದಾರೆ. ಕೆಲವರ ತಪ್ಪಿನಿಂದಾಗಿ ಇದೀಗ ಪಕ್ಷದ ಎಲ್ಲಾ 63 ಶಾಸಕರ ಮೇಲೂ ಅನುಮಾನ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯ ಬಗ್ಗೆ ನಿನ್ನೆ ನಾಯಕ ನಿತಿನ್ ನಬಿನ್ ಅವರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

​ಈ ವಾರದಲ್ಲಿ ನಾನು ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಅವರು ದೆಹಲಿಗೆ ತೆರಳುತ್ತಿದ್ದು, ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಬಗ್ಗೆ ದೆಹಲಿಯಲ್ಲಿಯೇ ಚರ್ಚೆ ನಡೆಸಲಿದ್ದೇವೆ. ತಾಯಿಯಂತಹ ಪಕ್ಷಕ್ಕೆ ದ್ರೋಹ ಬಗೆದ ಶಾಸಕರು ಯಾರೆಂಬುದು ಶ್ರೀಕ್ಷೇತ್ರದಲ್ಲಿಯೇ ಬಹಿರಂಗವಾಗಲಿ ಎಂದು ವಿಜಯೇಂದ್ರ ಗುಡುಗಿದ್ದಾರೆ.

​11 ಮತಗಳ ಕ್ರಾಸ್ ವೋಟಿಂಗ್ ಮತ್ತು ಮುಖಭಂಗದಿಂದ ಪಾರಾದ ಬಿಜೆಪಿ

​ಇತ್ತೀಚಿನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಒಟ್ಟಾರೆಯಾಗಿ 11 ಮತಗಳು ಕ್ರಾಸ್ ವೋಟಿಂಗ್ ಆಗಿದ್ದವು. ಮೈತ್ರಿಪಕ್ಷದ ಶಾಸಕರ ಈ ಅಡ್ಡಮತದಾನದಿಂದಾಗಿ ಜೆಡಿಎಸ್ ಅಭ್ಯರ್ಥಿ ಅನಿರೀಕ್ಷಿತ ಸೋಲು ಕಾಣುವಂತಾಯಿತು. ಇನ್ನು ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಪೈಕಿ ಓರ್ವ ಅಭ್ಯರ್ಥಿ ತೀವ್ರ ಪ್ರಯಾಸದಿಂದ ಗೆಲುವಿನ ದಡ ಸೇರಿದ್ದರು. ಕೊನೆಯ ಕ್ಷಣದಲ್ಲಿ ರಾಜ್ಯ ಬಿಜೆಪಿ ನಾಯಕರು ಓರ್ವ ಅಭ್ಯರ್ಥಿಗೆ ನಿಖರವಾಗಿ 30 ಮತಗಳು ಎಂದು ಹಂಚಿಕೆ ಮಾಡುವ ತಂತ್ರ ರೂಪಿಸಿದ್ದರಿಂದ ಮಾತ್ರ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಲಿದ್ದ ಭಾರಿ ಮುಖಭಂಗ ಸ್ವಲ್ಪದರಲ್ಲೇ ತಪ್ಪಿತ್ತು.

ಇದೀಗ ಮೈತ್ರಿ ಧರ್ಮಕ್ಕೆ ಹಾಗೂ ಪಕ್ಷಕ್ಕೆ ದ್ರೋಹ ಬಗೆದ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸುವ ಸ್ಪಷ್ಟ ಎಚ್ಚರಿಕೆಯನ್ನು ನಾಯಕರು ನೀಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds