ಗೃಹ ಸಚಿವರೇ ಇತ್ತ ಗಮನಹರಿಸಿ: ಆನಂದರಾವ್ ಫ್ಲೈಓವರ್ ಒಳಗೆ ಪತ್ತೆಯಾಯ್ತು Drugs ಅಡ್ಡೆ ಮತ್ತು ರಹಸ್ಯ ಕೊಠಡಿ!

ಹಂಚಿಕೊಳ್ಳಿ

ಸಿಲಿಕಾನ್ ಸಿಟಿ ಬೆಂಗಳೂರಿನ ಆನಂದರಾವ್ ವೃತ್ತದ ಫ್ಲೈಓವರ್ ಕೆಳಗೆ ಬೆಚ್ಚಿಬೀಳಿಸುವಂತ ಘಟನೆಯೊಂದು ಬೆಳಕಿಗೆ ಬಂದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಗಮನಕ್ಕೆ ಈ ಆಘಾತಕಾರಿ ವಿಚಾರ ಬರಲೇಬೇಕಿದೆ. ನಗರದ ಪ್ರಮುಖ ಫ್ಲೈಓವರ್ ಕೆಳಗೆ ಕಳ್ಳರು ಮತ್ತು ಡ್ರಗ್ಸ್ ವ್ಯಸನಿಗಳು ತಮ್ಮದೇ ಆದ ಒಂದು ರಹಸ್ಯ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾರೆ. ಫ್ಲೈಓವರ್ ಒಳಗೆ ಯಾರಿಗೂ ಕಾಣದಂತೆ ಒಂದು ರಹಸ್ಯ ಕೊಠಡಿ ಹಾಗೂ ಅಲ್ಲಿಂದ ಕ್ಷಣಾರ್ಧದಲ್ಲಿ ತಪ್ಪಿಸಿಕೊಳ್ಳಲು ರಹಸ್ಯ ಮಾರ್ಗವೊಂದನ್ನು ನಿರ್ಮಿಸಿಕೊಂಡಿರುವುದು ಸಾರ್ವಜನಿಕರನ್ನು ಹಾಗೂ ವಾಹನ ಸವಾರರನ್ನು ಬೆಚ್ಚಿಬೀಳಿಸಿದೆ.

​ಈ ರಹಸ್ಯ ಕೊಠಡಿಯ ಸುತ್ತಮುತ್ತಲೂ ಗಾಂಜಾ ಮತ್ತು ಡ್ರಗ್ಸ್ ಅಮಲು ಜೋರಾಗಿಯೇ ನಡೆಯುತ್ತಿದೆ ಎಂಬುದಕ್ಕೆ ಅಲ್ಲಿ ಸಿಕ್ಕಿರುವ ವಸ್ತುಗಳೇ ಸಾಕ್ಷಿಯಾಗಿವೆ. ಆನಂದರಾವ್ ಫ್ಲೈಓವರ್ ಕೆಳಭಾಗದಲ್ಲಿ ಮತ್ತು ರಹಸ್ಯ ಮಾರ್ಗದ ಬಳಿ ಯಥೇಚ್ಛವಾಗಿ ಡ್ರಗ್ಸ್ ತೆಗೆದುಕೊಳ್ಳಲು ಬಳಸುವ ಸಿರಿಂಜ್‌ಗಳು ಹಾಗೂ ವೈಟ್ನರ್ ಬಾಟಲಿಗಳು ಪತ್ತೆಯಾಗಿದ್ದು, ಇದೊಂದು ಸಂಪೂರ್ಣ ಡ್ರಗ್ಸ್ ಅಡ್ಡೆಯಾಗಿ ಮಾರ್ಪಟ್ಟಿದೆ. ಹಗಲು-ರಾತ್ರಿ ಎನ್ನದೆ ಈ ರೀತಿಯ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

​ದಿನನಿತ್ಯವೂ ಫ್ಲೈಓವರ್ ಪಕ್ಕದಲ್ಲಿ ವಾಹನ ನಿಲ್ಲಿಸುತ್ತಿದ್ದ ಚಾಲಕರೇ ಈ ಖದೀಮರ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ವಾಹನ ನಿಲ್ಲಿಸಿ ವಿಶ್ರಮಿಸುತ್ತಿರುವ ವಾಹನ ಚಾಲಕರ ಮೊಬೈಲ್ ಕದ್ದು, ಈ ಖದೀಮರು ಕಣ್ಣೆದುರೇ ಫ್ಲೈಓವರ್ ಒಳಗೆ ನಿರ್ಮಿಸಿಕೊಂಡಿರುವ ರಹಸ್ಯ ಮಾರ್ಗದಲ್ಲಿ ಎಸ್ಕೇಪ್ ಆಗುತ್ತಿದ್ದಾರೆ. ಕೇವಲ 2 ದಿನಗಳ ಹಿಂದೆಯಷ್ಟೇ ವಾಹನ ಚಾಲಕನೊಬ್ಬನ ಐ-ಫೋನ್ ಕದ್ದಿದ್ದ ಈ ದುಷ್ಕರ್ಮಿಗಳು, ಪ್ರಶ್ನಿಸಲು ಹೋದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.

ಒಟ್ಟು 4 ಜನರ ಗುಂಪಿನಲ್ಲಿ ಬಂದಿದ್ದ ಅನ್ಯರಾಜ್ಯದ ಪ್ರಜೆಗಳು, ಚಾಲಕರ ಮೇಲೆ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ಕೃತ್ಯಗಳ ಬಗ್ಗೆ ಕೂಡಲೇ ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರು ಕಠಿಣ ಕ್ರಮ ಕೈಗೊಂಡು ಫ್ಲೈಓವರ್ ಕೆಳಗಿನ ಅಕ್ರಮಕ್ಕೆ ಬ್ರೇಕ್ ಹಾಕಬೇಕಿದೆ.

Leave a Reply

Your email address will not be published. Required fields are marked *

Advertisement


This will close in 3 seconds