NEET ಹಗರಣ: ಬೆಂಗಳೂರಿನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ನಟ ಪ್ರಕಾಶ್ ರಾಜ್

ಹಂಚಿಕೊಳ್ಳಿ

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET-UG 2026) ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಕರಾವಳಿ ಹಾಗೂ ದೇಶದ ವಿವಿಧೆಡೆ ಪ್ರತಿಭಟನೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಮ್ಮಿಕೊಂಡಿರುವ ಬೃಹತ್ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಲು ಖ್ಯಾತ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಆಗಮಿಸಲಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ಮಾಹಿತಿ ನೀಡಿರುವ ಪ್ರಕಾಶ್ ರಾಜ್, ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಲು ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಶಾಂತಿಯುತ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.

​ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳ ನೇತೃತ್ವದ ಈ ಪ್ರತಿಭಟನಾ ಆಂದೋಲನವು ದೇಶದಾದ್ಯಂತ ಈಗಾಗಲೇ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಈ ಹಿಂದೆ ಜೂನ್ 6 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಭಾರಿ ಪ್ರದರ್ಶನ ನಡೆಸಿದ್ದ ಈ ಸಂಘಟನೆಯು, ತದನಂತರ ಜೂನ್ 11 ರಂದು ಪುಣೆ, ಜೂನ್ 12 ರಂದು ಲಕ್ನೋ ಮತ್ತು ಜೂನ್ 13 ರಂದು ಅಮೃತಸರದಲ್ಲಿ ಯಶಸ್ವಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು.

ಇಂದು ಭಾನುವಾರ ಬೆಂಗಳೂರಿನ ಜೊತೆಗೆ ತೆಲಂಗಾಣದ ಹೈದರಾಬಾದ್‌ನಲ್ಲೂ ಪ್ರತಿಭಟನೆ ನಡೆಯಲಿದ್ದು, ಅಲ್ಲಿ ಪ್ರಖ್ಯಾತ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಯುವಕರು ಜೇಡ ಮತ್ತು ಜಿರಳೆ ಮುಖವಾಡಗಳನ್ನು ಧರಿಸಿ, ಕೈಯಲ್ಲಿ ಹೂವುಗಳನ್ನು ಹಿಡಿದು ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

​ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಪರೀಕ್ಷಾ ಮಾಫಿಯಾವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿಜೆಪಿ ಸಂಘಟನೆಯ ಪ್ರಮುಖರಾದ ದಿಪ್ಕೆ ಕಿಡಿಕಾರಿದ್ದಾರೆ. ನೀಟ್ ಮತ್ತು ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಜೂನ್ 20 ರಂದು ದೇಶದಾದ್ಯಂತ ಇರುವ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಒಟ್ಟುಗೂಡಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಜನಾಂದೋಲನ ಹಮ್ಮಿಕೊಳ್ಳಲಾಗುವುದು ಹಾಗೂ ಶಿಕ್ಷಣ ಸಚಿವರು ರಾಜೀನಾಮೆ ನೀಡುವವರೆಗೂ ಅಲ್ಲಿಯೇ ಮೊಕ್ಕಾಂ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 1 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೋ ಅಥವಾ ಒಬ್ಬ ಅಸಮರ್ಥ ಸಚಿವ ಮುಖ್ಯವೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds