ಕುಮಟಾ(ಉತ್ತರಕನ್ನಡ): ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ಮತ್ತಷ್ಟು ಬಲಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಡಿಗ ಮಹಾಮಂಡಳ ರಾಜ್ಯ ಘಟಕದ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಸಮಾಜದ ಹಿರಿಯ ಧಾರ್ಮಿಕ ಮುಖಂಡರಾದ ಪ್ರಣವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಈಡಿಗ ಮಹಾಮಂಡಳದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ, ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಸದಸ್ಯರು, ಕಳೆದ ಮೂರು ವರ್ಷಗಳಿಂದ ಸಮಾಜದ ಪ್ರತಿನಿಧಿಯಾಗಿ ಸಚಿವ ಮಧು ಬಂಗಾರಪ್ಪ ಅವರಿಗೆ ಅವಕಾಶ ನೀಡಲಾಗಿದೆ. ಇದೀಗ ಸಮಾಜದ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಹಾಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಸಮಾಜದ ಸಮಸ್ಯೆಗಳು ಹಾಗೂ ಹಕ್ಕುಗಳ ವಿಚಾರವಾಗಿ ನಿರಂತರವಾಗಿ ಧ್ವನಿ ಎತ್ತಿರುವ ಬೇಳೂರು ಗೋಪಾಲಕೃಷ್ಣ ಅವರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಮಾಜದ ರಾಜಕೀಯ ಪ್ರಾತಿನಿಧ್ಯ ಮತ್ತಷ್ಟು ಬಲಗೊಳ್ಳಬೇಕಾದರೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಅಗತ್ಯ ಎಂದು ಸದಸ್ಯರು ಒತ್ತಿ ಹೇಳಿದರು.
ಸಭೆಯ ವೇಳೆ ಬೇಳೂರು ಗೋಪಾಲಕೃಷ್ಣ ಅವರ ಭಾವಚಿತ್ರಗಳನ್ನು ಹಿಡಿದು ಸಚಿವ ಸ್ಥಾನ ನೀಡುವಂತೆ ಸದಸ್ಯರು ಘೋಷಣೆಗಳನ್ನು ಕೂಗಿದರು. ಇದೇ ಸಂದರ್ಭದಲ್ಲಿ ರಾಜ್ಯದ ಭವಿಷ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲಿ ಎಂದು ಹಾರೈಸಿದ ಕೆಲ ಸದಸ್ಯರು ಶುಭಾಶಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಿ, ಸಚಿವ ಸಂಪುಟ ಪುನರ್‌ರಚನೆ ವೇಳೆ ಬೇಳೂರು ಗೋಪಾಲಕೃಷ್ಣ ಅವರಿಗೆ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.



Leave a Reply