ಬೆಂಗಳೂರು: ನಗರದಲ್ಲಿ ಹೆಚ್ಚಾಗುತ್ತಿರುವ ಅಪ್ರಾಪ್ತರ ಮದ್ಯಪಾನ ಮತ್ತು ತಂಬಾಕು ಸೇವನೆ ಪ್ರಕರಣಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಪಬ್ಗಳು, ಬ್ರೂವರೀಸ್, ಬಾರ್ಗಳು, ಕ್ಲಬ್ಗಳು, ಲಾಂಜ್ಗಳು, ರೆಸ್ಟೋರೆಂಟ್ಗಳು ಹಾಗೂ ಮದ್ಯ ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳಿಗೆ ಅಪ್ರಾಪ್ತ ವಯಸ್ಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಮತ್ತು ಮದ್ಯಪಾನ ಮಾಡುವುದನ್ನು ತಡೆಗಟ್ಟಲು ತಕ್ಷಣವೇ ನೋಟಿಸ್ ಜಾರಿ ಮಾಡುವಂತೆ ಅವರು ನಗರ ಪೊಲೀಸ್ ಅಧಿಕಾರಿಗಳಿಗೆ ಸೋಮವಾರ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ 4,093 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಇತ್ತೀಚೆಗೆ ನಡೆಸಲಾದ ಅಧ್ಯಯನವೊಂದು ಆತಂಕಕಾರಿ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ನಗರದಲ್ಲಿ ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಸೇವನೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯದಲ್ಲಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇಕಡಾ 33 ರಷ್ಟು ವಿದ್ಯಾರ್ಥಿಗಳು ಮದ್ಯಪಾನಕ್ಕೆ ದಾಸರಾಗಿದ್ದರೆ, ಶೇಕಡಾ 18ರಷ್ಟು ಮಂದಿ ತಂಬಾಕು ವ್ಯಸನಕ್ಕೆ ಒಳಗಾಗಿದ್ದಾರೆ ಎಂಬುದು ಆತಂಕದ ವಿಚಾರವಾಗಿದೆ. ಯುವಜನರು ಮದ್ಯಪಾನವನ್ನು ಪ್ರಾರಂಭಿಸುವ ಸರಾಸರಿ ವಯಸ್ಸು ಕೇವಲ 17 ವರ್ಷ ಎಂದು ವರದಿಯಾಗಿದ್ದು, ಕೆಲವು ಆಘಾತಕಾರಿ ಪ್ರಕರಣಗಳಲ್ಲಿ 8ನೇ ವಯಸ್ಸಿಗೇ ಮಕ್ಕಳು ಮದ್ಯದ ರುಚಿ ನೋಡಿರುವುದು ದಾಖಲಾಗಿದೆ.

ಇದು ಕೇವಲ ಮದ್ಯ ಮಾರಾಟ ಪರವಾನಗಿಯ ಸಮಸ್ಯೆಯಲ್ಲ, ಬದಲಾಗಿ ನಮ್ಮ ಮುಂದಿನ ಪೀಳಿಗೆಯ ಯುವಕರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ಅತಿಮುಖ್ಯ ವಿಚಾರವಾಗಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ. ಮದ್ಯ ಮಾರಾಟ ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳು ಗ್ರಾಹಕರಿಗೆ ಪ್ರವೇಶ ನೀಡುವ ಮೊದಲು ಮತ್ತು ಮದ್ಯ ಪೂರೈಸುವ ಮುನ್ನ ಕಟ್ಟುನಿಟ್ಟಾಗಿ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಜಾರಿಗೆ ತರಲೇಬೇಕು ಎಂದು ಅವರು ಎಚ್ಚರಿಸಿದ್ದಾರೆ. ವಾಣಿಜ್ಯ ಲಾಭಕ್ಕಾಗಿ ನಮ್ಮ ಮಕ್ಕಳ ಸುರಕ್ಷತೆ ಮತ್ತು ಉಜ್ವಲ ಭವಿಷ್ಯವನ್ನು ಬಲಿಕೊಡಲು ಸಾಧ್ಯವಿಲ್ಲ, ಹಾಗಾಗಿ ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರವು ಶೂನ್ಯ ಸಹಿಷ್ಣುತೆಯ (Zero Tolerance) ನೀತಿಯನ್ನು ಅನುಸರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಸಚಿವರು ಕೆಲವು ಪ್ರಮುಖ ನಿರ್ದೇಶನಗಳನ್ನು ಹೊರಡಿಸಿದ್ದಾರೆ. “ಮಾನ್ಯವಾದ ಗುರುತಿನ ಚೀಟಿ ಇಲ್ಲದಿದ್ದರೆ, ಪ್ರವೇಶವಿಲ್ಲ” ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಸರ್ಕಾರ ನೀಡಿದ ವಯಸ್ಸಿನ ಪುರಾವೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ನಿಯಮ ಮೀರಿ ಅಪ್ರಾಪ್ತ ವಯಸ್ಕರಿಗೆ ಸೇವೆ ಒದಗಿಸುವ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಇದಕ್ಕೆ ಸಂಸ್ಥೆಯ ಮಾಲೀಕರು, ವ್ಯವಸ್ಥಾಪಕರು ಮತ್ತು ಪರವಾನಗಿ ಹೊಂದಿರುವವರೇ ನೇರ ಹೊಣೆಗಾರರಾಗಲಿದ್ದಾರೆ.
ಅಲ್ಲದೆ, ಪ್ರವೇಶ ದ್ವಾರದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸುತ್ತಿರಬೇಕು ಮತ್ತು ಆ ದೃಶ್ಯಾವಳಿಗಳನ್ನು ಸಂರಕ್ಷಿಸಿಡಬೇಕು. ಈ ನಿಯಮಗಳ ಪರಿಣಾಮಕಾರಿ ಜಾರಿಗಾಗಿ ಪೊಲೀಸ್ ಇಲಾಖೆಯು ಸ್ಥಳೀಯ ಸಂಸ್ಥೆಗಳು, ಆರ್ಡಬ್ಲ್ಯೂಎಗಳು (RWA) ಮತ್ತು ನಾಗರಿಕ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.


Leave a Reply