Bollywood ನಟ ರಣವೀರ್ ಸಿಂಗ್ ಮೇಲಿನ ನಿಷೇಧ ದಿಢೀರ್ ವಾಪಸ್ ಪಡೆದ ಸಿನಿ ನೌಕರರ ಒಕ್ಕೂಟ!

ಮುಂಬೈ: ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಘೋಷಿಸಲಾಗಿದ್ದ ‘ಅಸಹಕಾರ’ (ಅನಧಿಕೃತ ನಿಷೇಧ) ನಿರ್ಧಾರವನ್ನು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಇಂದು (ಜೂನ್ 03) ದಿಢೀರ್ ಆಗಿ ಹಿಂಪಡೆದಿದೆ. ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ರಣವೀರ್ ಕೊನೆಯ ಕ್ಷಣದಲ್ಲಿ ಹೊರನಡೆದು ಒಪ್ಪಂದ ಮುರಿದಿದ್ದಾರೆ ಎಂದು ಆರೋಪಿಸಿ ಸಿನಿ ನೌಕರರ ಒಕ್ಕೂಟವು ಅವರ ವಿರುದ್ಧ ಈ ಕಠಿಣ ಕ್ರಮ ಕೈಗೊಂಡಿತ್ತು.

ತಮ್ಮ ವಿರುದ್ಧ ನಿಷೇಧ ಹೇರಿದ್ದ ಒಕ್ಕೂಟಕ್ಕೆ ನಟ ರಣವೀರ್ ಸಿಂಗ್ ನಿನ್ನೆಯಷ್ಟೇ (ಜೂನ್ 02) ಕಾನೂನಾತ್ಮಕವಾಗಿ ನೋಟಿಸ್ ಜಾರಿ ಮಾಡಿದ್ದರು. ಇದರ ಬೆನ್ನಲ್ಲೇ ಒಕ್ಕೂಟವು ನಿಷೇಧ ಹಿಂಪಡೆದಿರುವುದು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಾನೂನು ನೋಟಿಸ್‌ಗೆ ಹೆದರಿಲ್ಲ ಎಂದ ಒಕ್ಕೂಟ

ಹಠಾತ್ತನೆ ನಿಷೇಧ ಹಿಂಪಡೆದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಒಕ್ಕೂಟವು, ತಾವು ರಣವೀರ್ ಸಿಂಗ್ ನೀಡಿರುವ ಲೀಗಲ್ ನೋಟಿಸ್‌ಗೆ ಹೆದರಿ ಈ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದೆ. ಬದಲಿಗೆ ಸಹವರ್ತಿ ಚಲನಚಿತ್ರ ಮಂಡಳಿಗಳಾದ ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA) ಮತ್ತು ಸಿನಿ ಅಂಡ್ ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (CINTAA) ಪ್ರಮುಖ ಮನವಿಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ರಣವೀರ್ ನೀಡಿರುವ ಕಾನೂನು ನೋಟಿಸ್‌ಗೆ ತಮ್ಮ ಕಾನೂನು ತಂಡವು ಸೂಕ್ತ ರೀತಿಯಲ್ಲಿ ಉತ್ತರಿಸಲಿದೆ ಎಂದೂ ಸ್ಪಷ್ಟಪಡಿಸಿದೆ.

ಚಲನಚಿತ್ರ ಮಂಡಳಿಗಳ ಒಮ್ಮತದ ನಿರ್ಧಾರ

“ನಾವು ರಣವೀರ್ ಸಿಂಗ್ ವಿರುದ್ಧ ಅಸಹಕಾರ ಘೋಷಿಸಿದ ಬಳಿಕ ಇತರ ಚಲನಚಿತ್ರ ಮಂಡಳಿಗಳನ್ನು ಸಂಪರ್ಕಿಸಿ ಬೆಂಬಲ ಕೋರಿದ್ದೆವು. ನಮಗೆ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾದಿಂದ ಪ್ರತಿಕ್ರಿಯೆಗಳು ಬಂದಿವೆ. ಕೊನೆಯ ಕ್ಷಣದಲ್ಲಿ ರಣವೀರ್ ‘ಡಾನ್ 3’ ಚಿತ್ರದಿಂದ ಹಿಂದೆ ಸರಿದಿರುವುದು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡಿರುವುದನ್ನು ಪ್ರೊಡ್ಯೂಸರ್ಸ್ ಗಿಲ್ಡ್ ಖಂಡಿಸಿದೆ. ಆದರೆ, ಚಲನಚಿತ್ರೋದ್ಯಮದ ಒಟ್ಟಾರೆ ಹಿತದೃಷ್ಟಿಯಿಂದ ಅಸಹಕಾರ ನಿರ್ದೇಶನವನ್ನು ಸದ್ಯಕ್ಕೆ ಹಿಂಪಡೆಯುವಂತೆ ಇಂಪಾ (IMPPA) ವಿನಂತಿಸಿದೆ” ಎಂದು FWICE ನ ಪಂಡಿತ್ ಮಾಹಿತಿ ನೀಡಿದ್ದಾರೆ.

“ನಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ನಮ್ಮದು 70 ವರ್ಷ ಹಳೆಯ ಪ್ರಭಾವಿ ಸಂಸ್ಥೆಯಾಗಿದ್ದು, ಇಂತಹ ಅಸಂಖ್ಯಾತ ಕಾನೂನು ನೋಟಿಸ್‌ಗಳನ್ನು ನೋಡಿದ್ದೇವೆ. ಚಿತ್ರರಂಗದಲ್ಲಿ ಎಲ್ಲಾ ಸಮಸ್ಯೆಗಳೂ ಸೌಹಾರ್ದಯುತವಾಗಿ ಮತ್ತು ಶೀಘ್ರವಾಗಿ ಬಗೆಹರಿಯಬೇಕೆಂದು ನಾವು ಬಯಸುತ್ತೇವೆ. ನಾವು ನಿರ್ದೇಶನ ಹೊರಡಿಸಿದ ನಂತರ ರಣವೀರ್ ಮಾತುಕತೆಗೆ ಬರುತ್ತಾರೆ ಎಂದು ನಿರೀಕ್ಷಿಸಿದ್ದೆವು, ಆದರೆ ಅವರ ತಂಡ ಅವರಿಗೆ ತಪ್ಪು ದಾರಿ ತೋರಿಸಿದೆ” ಎಂದು FWICE ಅಧ್ಯಕ್ಷ ಬಿ.ಎನ್. ತಿವಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಒಕ್ಕೂಟವು ನಿಷೇಧವನ್ನು ಹಿಂಪಡೆದಿರುವುದರಿಂದ ರಣವೀರ್ ಸಿಂಗ್ ಅವರ ಮುಂದಿನ ಸಿನಿಮಾಗಳ ಚಿತ್ರೀಕರಣಕ್ಕೆ ಇದ್ದ ಕುತ್ತು ನಿವಾರಣೆಯಾದಂತಾಗಿದೆ. ಆದರೆ ‘ಡಾನ್ 3’ ಚಿತ್ರದ ಗೊಂದಲ ಮತ್ತು ಈ ಕಾನೂನು ಹೋರಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *