Sirsi ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ವಿಳಂಬ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ

ಹಂಚಿಕೊಳ್ಳಿ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಿರ್ಮಿಸಲಾಗುತ್ತಿರುವ 250 ಹಾಸಿಗೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಶಿರಸಿಯ ‘ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್’ ಅಧ್ಯಕ್ಷರಾದ ಅನಂತ ಮೂರ್ತಿ ಹೆಗಡೆ ಅವರು ಸಲ್ಲಿಸಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಾಖ್ರು ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ಹೈಕೋರ್ಟ್ ವಕೀಲರಾದ ಪ್ರಭಾಕರ ಎಲ್. ಶೆಟ್ಟಿ ಅವರು ವಕಾಲತ್ತು ವಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ನಿರ್ದೇಶಕರು, ಮುಖ್ಯ ಎಂಜಿನಿಯರ್, ಉತ್ತರ ಕನ್ನಡ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

ಅರ್ಜಿಯಲ್ಲಿನ ಪ್ರಮುಖ ಅಂಶಗಳು

ಶಿರಸಿಯಲ್ಲಿರುವ 100 ಹಾಸಿಗೆಗಳ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರವು 2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಒಟ್ಟು ₹26.8 ಕೋಟಿ ವೆಚ್ಚದ ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿ, ಟೆಂಡರ್ ಪ್ರಕ್ರಿಯೆಯನ್ನೂ ಅಂತಿಮಗೊಳಿಸಲಾಗಿತ್ತು.

ಆದರೆ, ಐದು ವರ್ಷ ಕಳೆದರೂ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು, ನರ್ಸ್ ಹಾಗೂ ಇತರ ಸಿಬ್ಬಂದಿಯನ್ನು ನಿಯೋಜಿಸಿಲ್ಲ ಮತ್ತು ಜೀವ ಉಳಿಸುವ ವೈದ್ಯಕೀಯ ಉಪಕರಣಗಳನ್ನೂ ಖರೀದಿಸಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ರೋಗಿಗಳ ಪರದಾಟ ಮತ್ತು ಸಾವು-ನೋವು

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಹೃದ್ರೋಗ, ನರರೋಗ ತಜ್ಞರು ಮತ್ತು ಶಸ್ತ್ರಚಿಕಿತ್ಸೆಯ ನುರಿತ ವೈದ್ಯರಿಲ್ಲ. ಇದರಿಂದಾಗಿ ಶಿರಸಿ, ಸಿದ್ದಾಪುರ, ಮುಂಡಗೋಡು ಮತ್ತು ಹಾನಗಲ್ ಭಾಗದ ರೋಗಿಗಳಿಗೆ ಹೃದಯಾಘಾತವಾದಾಗ ಅಥವಾ ಮೆದುಳಿಗೆ ಪೆಟ್ಟಾದಾಗ ಎದುರಾಗುತ್ತಿರುವ ಸಂಕಷ್ಟಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು 125 ಕಿ.ಮೀ. ದೂರದಲ್ಲಿರುವ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇದೆ. ಹೀಗೆ ಆಂಬ್ಯುಲೆನ್ಸ್‌ನಲ್ಲಿ ಸಾಗಿಸುವ ಮಾರ್ಗಮಧ್ಯೆಯೇ ಹಲವು ರೋಗಿಗಳು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆಗಳು ನಡೆದಿವೆ ಎಂಬ ಗಂಭೀರ ಅಂಶವನ್ನು ಉಲ್ಲೇಖಿಸಲಾಗಿದೆ.

ಅರ್ಜಿದಾರರ ಆಗ್ರಹ

ನಿಗದಿತ ಕಾಲಮಿತಿಯೊಳಗೆ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಹೃದ್ರೋಗ ಹಾಗೂ ನರ ತಜ್ಞರು ಸೇರಿದಂತೆ ಅಗತ್ಯ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಯನ್ನು ತಕ್ಷಣ ನೇಮಿಸಬೇಕು. ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಯಂತ್ರಗಳು ಸೇರಿದಂತೆ ಜೀವ ಉಳಿಸುವ ಅತ್ಯಗತ್ಯ ವೈದ್ಯಕೀಯ ಉಪಕರಣಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds