ರಾಜ್ಯಸಭೆ ಸದಸ್ಯ ಹಾಗೂ ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷರಾಗಿದ್ದ ಜಿ.ಸಿ. ಚಂದ್ರಶೇಖರ್ ಅವರು ಮುಖ್ಯಮಂತ್ರಿ ಕಚೇರಿಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ತಮ್ಮ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಿ.ಸಿ. ಚಂದ್ರಶೇಖರ್ ಅವರನ್ನು ತಮ್ಮ ಪ್ರಧಾನ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಿಎಂ ಕಚೇರಿಯಲ್ಲಿ ಮತ್ತೊಬ್ಬ ಆಪ್ತನಿಗೆ ಮಹತ್ವದ ಸ್ಥಾನಮಾನ ಲಭಿಸಿದಂತಾಗಿದೆ.
ರಾಜಕೀಯ ವ್ಯವಹಾರ ಹಾಗೂ ಕುಂದುಕೊರತೆಗಳ ನಿರ್ವಹಣೆ

ಜಿ.ಸಿ. ಚಂದ್ರಶೇಖರ್ ಅವರು ಮುಖ್ಯಮಂತ್ರಿಯವರಿಗೆ ಪ್ರಮುಖವಾಗಿ ರಾಜಕೀಯ ವ್ಯವಹಾರಗಳು ಹಾಗೂ ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಗತ್ಯ ನೆರವು ಹಾಗೂ ಸಲಹೆಗಳನ್ನು ನೀಡಲಿದ್ದಾರೆ. ಈ ನೇಮಕಾತಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಯಾವುದೇ ಭತ್ಯೆಗಳಿಲ್ಲದ ಸಂಪೂರ್ಣ ಗೌರವಾಧಾರಿತ ಹುದ್ದೆ
ಈ ನೇಮಕಾತಿಯು ಸಂಪೂರ್ಣವಾಗಿ ಗೌರವಾಧಾರಿತ (Pro Bono) ಆಧಾರದ ಮೇಲೆ ನಡೆದಿದೆ ಎಂಬುದು ಗಮನಾರ್ಹ. ಈ ಹುದ್ದೆ ನಿಭಾಯಿಸುವುದಕ್ಕಾಗಿ ಜಿ.ಸಿ. ಚಂದ್ರಶೇಖರ್ ಅವರು ಸರ್ಕಾರದಿಂದ ಯಾವುದೇ ರೀತಿಯ ಸಂಭಾವನೆ, ಭತ್ಯೆ, ಗೌರವಧನ ಅಥವಾ ಇತರೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್.ಆರ್. ಅವರು ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿದ್ದಾರೆ.




Leave a Reply