ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಚಿರತೆ ಆತಂಕ: 3 ದಿನ ಕಳೆದರೂ ಸಿಗದ ಸುಳಿವು, ಬೋನ್ ಇಟ್ಟು ಕಾದುಕುಳಿತ ಅರಣ್ಯ ಸಿಬ್ಬಂದಿ

ಹಂಚಿಕೊಳ್ಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ ಸಮೀಪದ ಭಾರತೀನಗರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜುಲೈ 9 ರ ಮುಂಜಾನೆ ರಸ್ತೆ ದಾಟಿ ಪಾರ್ಕ್ ಒಳಗೆ ನುಗ್ಗಿದ್ದ ಚಿರತೆಯ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಘಟನೆ ನಡೆದು ಮೂರು ದಿನ ಕಳೆದರೂ ಚಿರತೆ ಇನ್ನೂ ಸೆರೆಯಾಗದ ಕಾರಣ ಬ್ಯಾಡರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಬೆಚ್ಚಿಬಿದ್ದಿದ್ದಾರೆ.

ಚಿರತೆ ಓಡಾಟದ ಖಚಿತ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆಗಿಳಿದಿರುವ ಅರಣ್ಯ ಇಲಾಖೆ ಹಾಗೂ ಬ್ಯಾಡರಹಳ್ಳಿ ಪೊಲೀಸರು, ಚಿರತೆ ಸೆರೆಗೆ ಭರ್ಜರಿ ಆಪರೇಷನ್ ಆರಂಭಿಸಿದ್ದಾರೆ. ಆಯಕಟ್ಟಿನ ಜಾಗಗಳಲ್ಲಿ ಹೆಚ್ಚುವರಿಯಾಗಿ ಬೋನ್‌ಗಳನ್ನು ಇರಿಸಿ, ರಾತ್ರಿಯಿಡೀ ಕಾವಲು ಕಾದರೂ ಚಿರತೆಯ ಯಾವುದೇ ಸುಳಿವು ಲಭ್ಯವಾಗಿಲ್ಲ. ದಟ್ಟವಾದ ಗಿಡಗಂಟಿಗಳು ಇರುವುದರಿಂದ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸಮೀಪದ ಅರಣ್ಯ ಪ್ರದೇಶದಿಂದ ಚಿರತೆ ದಾರಿ ತಪ್ಪಿ ಈ ವಸತಿ ಪ್ರದೇಶಕ್ಕೆ ಬಂದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಚಿರತೆ ಸೆರೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಈ ಭಾಗದಲ್ಲಿ ಗಸ್ತು ಹೆಚ್ಚಿಸಿದೆ. ಸಾರ್ವಜನಿಕರು ಒಂಟಿಯಾಗಿ ಓಡಾಡದಂತೆ, ರಾತ್ರಿ ಹಾಗೂ ಮುಂಜಾನೆ ವೇಳೆ ವಾಕಿಂಗ್ ಹೋಗದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ. ವಿಶೇಷವಾಗಿ ಬೋನ್ ಇಟ್ಟಿರುವ ಸುತ್ತಮುತ್ತಲ ಪ್ರದೇಶಗಳಲ್ಲಿ ಜನರು ಸುಳಿಯಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿರುವುದರಿಂದ, ಜೀವ ಭಯದಲ್ಲಿರುವ ಸ್ಥಳೀಯರು ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.

https://x.com/StateNewsIND/status/2075537261958168981

Leave a Reply

Your email address will not be published. Required fields are marked *

Advertisement


This will close in 3 seconds