ಚಿತ್ರದುರ್ಗ ಜಿಲ್ಲೆಯ ಇಂಗಳದಾಳ್ ಲಂಬಾಣಿಹಟ್ಟಿ ಗ್ರಾಮದ ಬಳಿ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ಭೀಕರ ಕೊ*ಲೆ ಪ್ರಕರಣವನ್ನು ಭೇದಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಚೌಳೂರು ಗ್ರಾಮದ ನಿವಾಸಿ, ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ (ಹೆಲ್ತ್ ಇನ್ಸ್‌ಪೆಕ್ಟರ್) ಆಗಿ ಕೆಲಸ ಮಾಡುತ್ತಿದ್ದ 38 ವರ್ಷದ ಶಿವಮೂರ್ತಿ ಕೊ*ಲೆಯಾದ ದುರ್ದೈವಿ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಏಕೈಕ ಕಾರಣಕ್ಕೆ ಆರೋಪಿಗಳು ಕಾರು ಬಾಡಿಗೆ ನೆಪದಲ್ಲಿ ಕಿಡ್ನಾಪ್ ಮಾಡಿ, ಹ*ತ್ಯೆಗೈದು ಸಾಕ್ಷ್ಯ ನಾಶಪಡಿಸಲು ಶ*ವವನ್ನು ಸುಟ್ಟು ಹಾಕಿದ್ದರು ಎಂಬ ಸ್ಪೋಟಕ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಜೂನ್ 26 ರಂದು ಶಿವಮೊಗ್ಗದ ಆಸ್ಪತ್ರೆಗೆ ಬಾಡಿಗೆ ಇದೆ ಎಂದು ಕಾರಿನಲ್ಲಿ ಹೋದ ಶಿವಮೂರ್ತಿ ನಾಪತ್ತೆಯಾಗಿದ್ದರು. ಬಳಿಕ ಅವರ ಕಾರು ಚನ್ನಗಿರಿ ಸಮೀಪದ ಶ್ರೀನಿವಾಸಪುರ ಗೇಟ್ ಬಳಿ ಪತ್ತೆಯಾಗಿದ್ದರಿಂದ, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಜುಲೈ 1 ರಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಸಹಾಯವಾಣಿ 112 ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಇಂಗಳದಾಳ್ ಲಂಬಾಣಿಹಟ್ಟಿ ಬಳಿಯ ಗುಡ್ಡದಲ್ಲಿ ಸುಟ್ಟು ಕರಕಲಾದ ಶ*ವ ಪತ್ತೆಯಾಗಿತ್ತು.
ಗ್ರಾಮಾಂತರ ಠಾಣೆಯ ಸಿಪಿಸಿ ವೀರಭದ್ರಪ್ಪ ಅವರು ನೀಡಿದ ಸುಳಿವಿನ ಆಧಾರದ ಮೇಲೆ, ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಶ*ವದ ಗುರುತು ಪತ್ತೆ ಹಚ್ಚಿದ್ದರು. ಇದಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ, ಮೃತನ ಕುಟುಂಬದ ಸೊಸೆ ಸುಮತಿ ಹಾಗೂ ನೂರ್ ಅಹಮದ್ ನಡುವಿನ ಅನೈತಿಕ ಸಂಬಂಧವೇ ಈ ಭೀಕರ ಕೊ*ಲೆಗೆ ಕಾರಣ ಎಂಬುದು ದೃಢಪಟ್ಟಿದೆ.
ಈ ಅನೈತಿಕ ಸಂಬಂಧದ ಬಗ್ಗೆ ತಿಳಿದಿದ್ದ ಶಿವಮೂರ್ತಿ, ತೀವ್ರ ವಿರೋಧ ವ್ಯಕ್ತಪಡಿಸಿ ಹಲವು ಬಾರಿ ಬುದ್ಧಿಮಾತು ಹೇಳಿದ್ದರು. ಇದೇ ದ್ವೇಷದಿಂದ ಪ್ರಿಯಕರ ಹಾಗೂ ಸಹಚರರೊಂದಿಗೆ ಸೇರಿ ಹ*ತ್ಯೆಗೆ ಸಂಚು ರೂಪಿಸಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪ*ತ್ನಿ ಎನ್ನಲಾದ ಎ-2 ಸುಮತಿ (ರೂಪಾ), ಆಕೆಯ ಪ್ರಿಯಕರ ಎ-1 ನೂರ್ ಅಹಮದ್ ಅಲಿಯಾಸ್ ರಿಯಾಜ್, ಎ-4 ಅಕ್ಷಯ್ ಅಲಿಯಾಸ್ ಅಚ್ಚು ಹಾಗೂ ಎ-5 ಝಂಕಾರ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಅರುಣ್ ನಾಗೇಗೌಡ ನೇತೃತ್ವದ ಇನ್ಸ್ಪೆಕ್ಟರ್ ಬಾಲಚಂದ್ರ ನಾಯಕ್ ಅವರನ್ನೊಳಗೊಂಡ ವಿಶೇಷ ತಂಡವು ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಕರಣವನ್ನು ಭೇದಿಸಿದ್ದು, ತಂಡದ ದಕ್ಷ ಕಾರ್ಯವೈಖರಿಗೆ ಎಸ್ಪಿ ಶ್ಲಾಘನೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.




Leave a Reply