ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರು ಬಳಿಯ ತುಂಗಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಡ್ಯಾಂನ 8 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ನೀರು ದಾವಣಗೆರೆ ಜಿಲ್ಲೆಯ ಹರಿಹರ ಬಳಿ ತುಂಗಭದ್ರಾ ನದಿಯನ್ನು ಸೇರಿದೆ. ಬೇಸಿಗೆಯ ಬಿಸಿಲಿಗೆ ಸಂಪೂರ್ಣವಾಗಿ ಬತ್ತಿಹೋಗಿದ್ದ ತುಂಗಭದ್ರಾ ನದಿಗೆ ಭಾರಿ ಪ್ರಮಾಣದ ನೀರು ಹರಿದುಬಂದಿರುವುದರಿಂದ ಇದೀಗ ಹೊಸ ಜೀವಕಳೆ ಬಂದಂತಾಗಿದೆ.
ನದಿಪಾತ್ರದ ಗ್ರಾಮಸ್ಥರು ನಿರಾಳ
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ನದಿಪಾತ್ರದ ಗ್ರಾಮಗಳ ರೈತರು ಹಾಗೂ ಜನರು ತಕ್ಕಮಟ್ಟಿಗೆ ನಿರಾಳರಾಗಿದ್ದಾರೆ. ಪ್ರಮುಖವಾಗಿ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ, ನ್ಯಾಮತಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನದಿಪಾತ್ರದ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಹಾಗೂ ಕೃಷಿ ಚಟುವಟಿಕೆಗಳ ಆತಂಕ ಸದ್ಯಕ್ಕೆ ದೂರವಾದಂತಾಗಿದೆ. ಅಂತರ್ಜಲ ಮಟ್ಟವೂ ವೃದ್ಧಿಸುವ ಆಶಾವಾದ ಮೂಡಿದೆ.

ದಾವಣಗೆರೆಯಲ್ಲಿ ವರುಣನ ಮುನಿಸು
ನೆರೆಯ ಮಲೆನಾಡು ಭಾಗದಲ್ಲಿ ಮಳೆಯಾಗಿ ನದಿಗಳು ತುಂಬಿ ಹರಿಯುತ್ತಿದ್ದರೆ, ಇತ್ತ ದಾವಣಗೆರೆ ಜಿಲ್ಲೆಯ ಮೇಲೆ ಮಾತ್ರ ವರುಣ ಇನ್ನೂ ಕೃಪೆ ತೋರಿಲ್ಲ. ಜಿಲ್ಲೆಯಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಎದುರಾಗಿದೆ. ಹವಾಮಾನ ವರದಿಗಳ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ ಶೇಕಡಾ 58ರಷ್ಟು ಮಳೆ ಕೊರತೆ ಉಂಟಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಜಿಲ್ಲೆಯಾದ್ಯಂತ ಇಲ್ಲಿಯವರೆಗೆ ಕೇವಲ ಶೇಕಡಾ 8ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಇದರಿಂದಾಗಿ ಮಳೆಯಾಶ್ರಿತ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.




Leave a Reply