ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ (Karnataka MLC Elections 2026) ಪಕ್ಷದ ಶಾಸಕರೇ ಅಡ್ಡ ಮತದಾನ (Cross Voting) ಮಾಡಿರುವುದು ರಾಜ್ಯ ಬಿಜೆಪಿ ನಾಯಕರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಯಾರು ಅಡ್ಡ ಗೆರೆ ದಾಟಿದ್ದಾರೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲಾಗದ ಗೊಂದಲದ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಈ ಕುರಿತು ತನಿಖೆ ನಡೆಸುತ್ತಿರುವ ಸಿ.ಟಿ. ರವಿ ನೇತೃತ್ವದ ಸತ್ಯ ಶೋಧನಾ ಸಮಿತಿಯು ಇದೇ ಸೋಮವಾರ ತನ್ನ ಅಧಿಕೃತ ವರದಿಯನ್ನು ಸಲ್ಲಿಸಲು ಸಿದ್ಧವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ, ಸಲ್ಲಿಕೆಯಾಗಲಿರುವ ಈ ವರದಿಯಲ್ಲಿ ಪಕ್ಷದ 4 ರಿಂದ 5 ಶಾಸಕರು ಅಡ್ಡ ಮತದಾನ ಮಾಡಿರುವ ಬಗ್ಗೆ ಬಲವಾದ ಅನುಮಾನ ವ್ಯಕ್ತಪಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮಹತ್ವದ ರಿಪೋರ್ಟ್ ಸೋಮವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ತಲುಪಲಿದ್ದು, ಆ ನಂತರ ಮುಂದಿನ ಶಿಸ್ತು ಕ್ರಮಕ್ಕಾಗಿ ಪಕ್ಷದ ಹೈಕಮಾಂಡ್ ಅಂಗಳಕ್ಕೆ ರವಾನೆಯಾಗಲಿದೆ.

ಬೆಳಗಾವಿ ರಾಜಕಾರಣದಲ್ಲಿ ಸಂಚಲನ
ವರದಿ ಸಲ್ಲಿಕೆಗೆ ಮುನ್ನವೇ ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ದೊಡ್ಡ ಸಂಚಲನ ಸೃಷ್ಟಿಯಾಗಿದ್ದು, ಬೆಳಗಾವಿ ಮೂಲದ ಪ್ರಭಾವಿ ಹಿರಿಯ ಶಾಸಕರೊಬ್ಬರು ಅಡ್ಡ ಮತದಾನ ಮಾಡಿರಬಹುದು ಎಂಬ ದಟ್ಟ ಶಂಕೆ ವ್ಯಕ್ತವಾಗಿದೆ. ಈ ವಿಚಾರವು ಈಗಾಗಲೇ ಕೇಂದ್ರ ನಾಯಕತ್ವದ ಮುಂದೆಯೂ ಪ್ರಸ್ತಾಪವಾಗಿದ್ದು, ಬಿಜೆಪಿಯ ಆಂತರಿಕ ಸಮಿತಿ ಸಭೆಯಲ್ಲೂ ಈ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಬೆಳಗಾವಿ ರಾಜಕಾರಣ ಹಾಗೂ ಶಂಕಿತ ಶಾಸಕನ ನಡೆಗಳ ಕುರಿತು ಇನ್ನಷ್ಟು ರಹಸ್ಯ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಪ್ರಸ್ತುತ ಅಡ್ಡಮತದಾನ ಮಾಡಿದ ಆ ಶಾಸಕ ಯಾರು? ಅವರನ್ನು ಸಂಪೂರ್ಣವಾಗಿ ಪತ್ತೆಹಚ್ಚಲಾಗಿದೆಯೇ? ಎಂಬ ಪ್ರಶ್ನೆಗಳಿಗೆ ಮಾತ್ರ ಸದ್ಯಕ್ಕೆ ಯಾವುದೇ ಅಧಿಕೃತ ಉತ್ತರವಿಲ್ಲದೆ ವಿಷಯ ನಿಗೂಢವಾಗಿಯೇ ಉಳಿದಿದೆ. ಸೋಮವಾರ ಸಿ.ಟಿ. ರವಿ ಸಮಿತಿ ವರದಿ ಕೈ ಸೇರಿದ ಬಳಿಕವಷ್ಟೇ ಈ ರಾಜಕೀಯ ಹೈಡ್ರಾಮಾಕ್ಕೆ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.




Leave a Reply