ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಘಟನೆಗೆ ಅಸಲಿ ಕಾರಣ ಬಯಲು..!

ಹಂಚಿಕೊಳ್ಳಿ

ಬೆಂಗಳೂರು: ರಾಜಧಾನಿಯ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ (Cubbon Park Metro Station) ನಿನ್ನೆ ರಾತ್ರಿ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿದ್ದ ಘಟನೆಗೆ ಸಂಬಂಧಿಸಿದಂತೆ ನಮ್ಮ ಮೆಟ್ರೋ ಆಡಳಿತ ಮಂಡಳಿ (BMRCL) ಅಸಲಿ ಕಾರಣವನ್ನು ಬಯಲು ಮಾಡಿದೆ. ಈ ಸಂಚಾರ ವ್ಯತ್ಯಯಕ್ಕೆ ಮೆಟ್ರೋದ ತಾಂತ್ರಿಕ ದೋಷ ಕಾರಣವಲ್ಲ, ಬದಲಿಗೆ ಪ್ರಯಾಣಿಕರ ನಿರ್ಲಕ್ಷ್ಯವೇ ಕಾರಣ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಸಂಜೆ 7:36 ರಿಂದ 7:54 ರವರೆಗೆ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು. ಈ ಕುರಿತು ತೀವ್ರ ತನಿಖೆ ನಡೆಸಿದ ಬಿಎಂಆರ್‌ಸಿಎಲ್ ತಾಂತ್ರಿಕ ತಂಡಕ್ಕೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರೊಬ್ಬರ ನಿರ್ಲಕ್ಷ್ಯದಿಂದಾಗಿ ಮೆಟ್ರೋ ರೈಲಿನ ಬಾಗಿಲಿನ ಗೈಡ್‌ವೇನಲ್ಲಿ (ರೈಲು ಬಾಗಿಲು ಚಲಿಸುವ ಮಾರ್ಗ) ಲೋಹದ ಸರವೊಂದು ಸಿಲುಕಿಕೊಂಡಿತ್ತು. ಈ ಸರ ಸಿಲುಕಿದ್ದರಿಂದ ರೈಲಿನ ಸ್ವಯಂಚಾಲಿತ ಬಾಗಿಲು ಸರಿಯಾಗಿ ಮುಚ್ಚಲು ಸಾಧ್ಯವಾಗಿರಲಿಲ್ಲ. ಬಾಗಿಲು ಮುಚ್ಚದ ಕಾರಣ ಸುರಕ್ಷತೆಯ ದೃಷ್ಟಿಯಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಸಮಗ್ರ ತಾಂತ್ರಿಕ ಪರಿಶೀಲನೆಯ ಬಳಿಕ ರೈಲಿನ ಯಾವುದೇ ಉಪಕರಣಗಳಲ್ಲಾಗಲಿ ಅಥವಾ ಸಿಗ್ನಲಿಂಗ್ ವ್ಯವಸ್ಥೆಯಲ್ಲಾಗಲಿ ಯಾವುದೇ ಲೋಪವಿಲ್ಲ ಎಂದು ಮೆಟ್ರೋ ಅಧಿಕಾರಿಗಳು ದೃಢಪಡಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಾರ್ವಜನಿಕರು ಮೆಟ್ರೋ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪ್ರಯಾಣದ ವೇಳೆ ಜಾಗರೂಕರಾಗಿರಬೇಕು ಎಂದು ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds