ದಾವಣಗೆರೆ: ಸದಾ ಕಟ್ಟುಮಸ್ತಾದ ದೇಹದಾರ್ಢ್ಯ ಹಾಗೂ ಕ್ರೀಡಾ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದ ಯುವ ಸಾಧಕನೊಬ್ಬ ಜಿಮ್ ಮುಗಿಸಿ ಮನೆಗೆ ಮರಳುವಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಅತ್ಯಂತ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಕೆಟಿಜೆ ನಗರದ ನಿವಾಸಿಯಾದ ಸುಶೀಲಕುಮಾರ (26) ಸಾವನ್ನಪ್ಪಿದ ದುರ್ದೈವಿ ಬಾಡಿ ಬಿಲ್ಡರ್. ಪ್ರತಿದಿನದಂತೆ ಇಂದು ಸಹ ಸುಶೀಲಕುಮಾರ್ ಜಿಮ್‌ನಲ್ಲಿ ತಾಲೀಮು ಮುಗಿಸಿಕೊಂಡು ಮನೆಗೆ ವಾಪಸ್ ಬಂದಿದ್ದರು. ಆದರೆ, ಜಿಮ್‌ನಿಂದ ಬಂದು ಇನ್ನೇನು ಮನೆಗೆ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಏಕಾಏಕಿ ಅವರ ಮನೆ ಮುಂದೆಯೇ ಕುಸಿದು ಬಿದ್ದಿದ್ದಾರೆ. ತೀವ್ರ ಆತಂಕಗೊಂಡ ಸಂಬಂಧಿಕರು ಅವರನ್ನು ತಕ್ಷಣವೇ ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ, ಅವರು ಅದಾಗಲೇ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಸುಶೀಲಕುಮಾರ್ ಅವರು ತೀವ್ರ ಹೃದಯಾಘಾತದಿಂದ (Heart Attack) ಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಸುಶೀಲಕುಮಾರ್ ಕೇವಲ 26 ವರ್ಷದ ಪ್ರಾಯದಲ್ಲೇ ದೇಹದಾರ್ಢ್ಯ (Body Building) ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹತ್ತಾರು ಕಡೆ ಮಹತ್ವದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ದಾವಣಗೆರೆಗೆ ಕೀರ್ತಿ ತಂದಿದ್ದರು.
ಸದಾ ಫಿಟ್ ಆಗಿರುತ್ತಿದ್ದ, ಕ್ರೀಡಾ ಮನೋಭಾವದ ಯುವ ಬಾಡಿ ಬಿಲ್ಡರ್‌ನ ಈ ಹಠಾತ್ ಸಾವು ಅವರ ಅಪಾರ ಸ್ನೇಹಿತರ ಬಳಗಕ್ಕೆ ತೀವ್ರ ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದೆ. ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿದ್ದು, ಕೆಟಿಜೆ ನಗರದಲ್ಲಿ ಶೋಕದ ಛಾಯೆ ಆವರಿಸಿದೆ.




Leave a Reply