ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ದಿನಕ್ಕೆ ಸ್ಫೋಟಗೊಂಡಿದ್ದ ಖಾತೆ ಹಂಚಿಕೆಯ ಭಿನ್ನಮತ ಸದ್ಯಕ್ಕೆ ಕೊಂಚ ತಿಳಿಗೊಂಡಂತೆ ಕಾಣುತ್ತಿದೆ. ಹಿರಿಯ ನಾಯಕ ರಾಮಲಿಂಗಾರೆಡ್ಡಿ (Ramalinga Reddy) ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಬಹುತೇಕ ವಾಪಸ್ ಪಡೆದಿದ್ದಾರೆ ಎಂದು ಮೂಲಗಳು ಹೇಳುತ್ತಿದ್ದರೂ, ಆ ಕುರಿತಾದ ಸಸ್ಪೆನ್ಸ್ ಇನ್ನೂ ಅಧಿಕೃತವಾಗಿ ಮುಂದುವರಿದಿದೆ. ಈ ನಡುವೆ ಕಾಂಗ್ರೆಸ್ ವರಿಷ್ಠರು ಹಾಗೂ ಸಿಎಂ ನಡೆಸಿದ ಸಂಧಾನ ಸಫಲವಾಗುವ ಮುನ್ಸೂಚನೆ ಸಿಕ್ಕಿದೆ.
ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ನಿರ್ಧಾರವನ್ನು ಬದಲಿಸುವಂತೆ ಮಾಡಲು ಖುದ್ದಾಗಿ ಕಣಕ್ಕಿಳಿದ ಸಿಎಂ ಡಿ.ಕೆ. ಶಿವಕುಮಾರ್, ಶುಕ್ರವಾರ ತಡರಾತ್ರಿ ರೆಡ್ಡಿ ಅವರೊಂದಿಗೆ ಭಿನ್ನಮತ ಶಮನದ ಮಾತುಕತೆ ನಡೆಸಿದರು. ಇಬ್ಬರು ನಾಯಕರ ನಡುವೆ ಸತತ ಎರಡೂವರೆ ಗಂಟೆಗಳ ಕಾಲ ಸುದೀರ್ಘ ‘ಒನ್-ಟು-ಒನ್’ (One to One) ರಹಸ್ಯ ಸಭೆ ನಡೆದಿದೆ. ಈ ವೇಳೆ ಸಿಎಂ, ಹಿರಿಯ ನಾಯಕನ ಅಸಮಾಧಾನವನ್ನು ಆಲಿಸಿ ಮನವೊಲಿಸುವ ಗಂಭೀರ ಪ್ರಯತ್ನ ಮಾಡಿದ್ದಾರೆ.

ರಾಮಲಿಂಗಾರೆಡ್ಡಿ ಅವರೊಂದಿಗಿನ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆಶಿ, “ನಾನು, ರಾಮಲಿಂಗಾರೆಡ್ಡಿ ಹಾಗೂ ರೇವಣ್ಣ ನಾವೆಲ್ಲರೂ 1980ರ ದಶಕದಿಂದಲೂ ಅತ್ಯಂತ ಆಪ್ತ ಸ್ನೇಹಿತರು. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಅವರು ಕಾರ್ಯಾಧ್ಯಕ್ಷರಾಗಿದ್ದರು. ಈಗ ನಾನು ಮುಖ್ಯಮಂತ್ರಿ, ಅವರು ಸಚಿವರಾಗಿದ್ದಾರೆ. ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಬೆಳೆದವರು ಮತ್ತು ಪಕ್ಷವನ್ನು ಉಳಿಸಿಕೊಂಡು ಬಂದವರು. ಬೆಂಗಳೂರಿನ ಒಳಿತಿಗಾಗಿ ಶ್ರಮಿಸುವವರು ನಾವು. ಇದು ನಮ್ಮ ಫ್ಯಾಮಿಲಿ ಪ್ರಾಬ್ಲಂ (ಪಕ್ಷದ ಆಂತರಿಕ ಸಮಸ್ಯೆ). ನಾವೆಲ್ಲಾ ಕೂತು ಮಾತನಾಡಿದ್ದೇವೆ, ಈಗ ಸಮಸ್ಯೆ ಬಗೆಹರಿದಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ, ರೆಡ್ಡಿ ಅವರು ಖಾತೆ ಬದಲಾವಣೆಗೆ ಒಪ್ಪಿಕೊಂಡರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಅವರು ತಮಗಾದ ನೋವನ್ನು ಹೇಳಿಕೊಂಡಿದ್ದಾರೆ, ಕೇವಲ ಮಿಸ್ ಕಮ್ಯೂನಿಕೇಷನ್ ಆಗಿದೆ ಅಷ್ಟೇ” ಎಂದು ಹೇಳಿ ನಿಖರ ಉತ್ತರ ನೀಡದೆ ತೆರಳಿದರು.
ಇನ್ನೊಂದೆಡೆ ಸಿಎಂ ಭೇಟಿಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, “ಸಿಎಂ ಸಾಹೇಬರು ಏನು ಹೇಳಿದ್ದಾರೋ ಅದನ್ನೇ ನಾನು ಹೇಳುತ್ತೇನೆ. ಎಲ್ಲವೂ ನಿವಾರಣೆಯಾಗಿದೆ” ಎಂದಷ್ಟೇ ಮಾರ್ಮಿಕವಾಗಿ ನುಡಿದರು. ಆದರೆ, ಸಲ್ಲಿಕೆಯಾಗಿರುವ ರಾಜೀನಾಮೆಯನ್ನು ಅಧಿಕೃತವಾಗಿ ಹಿಂಪಡೆಯುವ ಬಗ್ಗೆ ಹಾಗೂ ತಮಗೆ ಹಂಚಿಕೆಯಾಗಿರುವ ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಮೌನ ವಹಿಸಿದರು. ಕೇವಲ ‘ಕಮ್ಯೂನಿಕೇಷನ್ ಗ್ಯಾಪ್’ ಆಗಿತ್ತು ಎಂದು ಹೇಳುವ ಮೂಲಕ ತಮ್ಮ ಮುಂದಿನ ತೀರ್ಮಾನವನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ.
ಹೀಗಾಗಿ, ರಾಮಲಿಂಗಾರೆಡ್ಡಿ ಅವರ ಅಸಮಾಧಾನ ಸಂಪೂರ್ಣವಾಗಿ ತಣ್ಣಗಾಗಿದೆಯೇ ಅಥವಾ ಹೈಕಮಾಂಡ್ ಮತ್ಯಾವುದಾದರೂ ಹೊಸ ಸೂತ್ರದ ಮೂಲಕ ಇವರ ಮನವೊಲಿಸಿದೆಯೇ ಎಂಬುದು ಮುಂದಿನ ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.




Leave a Reply