ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು (ಬುಧವಾರ) ಸಂಜೆ ಅಧಿಕಾರ ವಹಿಸಿಕೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಕಸರತ್ತು ಪರಮೋಚ್ಚ ಹಂತ ತಲುಪಿದೆ. ನೂತನ ಸಿಎಂ ಜೊತೆಗೆ ಮೊದಲ ಹಂತದಲ್ಲಿ ಎಷ್ಟು ಮಂದಿ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ ಎಂಬ ಅಂತಿಮ ಪಟ್ಟಿ ಸಿದ್ಧಪಡಿಸುವುದು ದೆಹಲಿ ಹೈಕಮಾಂಡ್‌ಗೆ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಲೋಕಭವನದಲ್ಲಿ ನಡೆಯಲಿರುವ ರಾಜಭವನದ ಅಧಿಕೃತ ಕಾರ್ಯಕ್ರಮಕ್ಕೆ ಬಹುತೇಕ ಬೆಳಗ್ಗೆ 10:00 ಗಂಟೆಯ ಬಳಿಕವಷ್ಟೇ ಅಂತಿಮಗೊಂಡ ಸಚಿವರ ಸಂಪೂರ್ಣ ಪಟ್ಟಿಯನ್ನು ಕಳುಹಿಸಿಕೊಡುವ ಸಾಧ್ಯತೆಗಳಿವೆ.

14 ರಿಂದ 15 ಮಂದಿ ಪಟ್ಟಿಗಾಗಿ ಸಿದ್ದರಾಮಯ್ಯ ಬಿಗಿ ಪಟ್ಟು!
ದೆಹಲಿಯಿಂದ ಬೆಂಗಳೂರಿಗೆ ವಾಪಸಾಗುವ ಮುನ್ನ ನಿರ್ಗಮಿತ ಸಿಎಂ ಸಿದ್ದರಾಮಯ್ಯನವರು 14 ರಿಂದ 15 ಮಂದಿ ಆಪ್ತರನ್ನು ಒಳಗೊಂಡ ಪಟ್ಟಿಯೊಂದನ್ನು ಹೈಕಮಾಂಡ್ ವರಿಷ್ಠರ ಮುಂದೆ ಇಟ್ಟಿದ್ದಾರೆ. ಈ ಪಟ್ಟಿಯನ್ನು ಯಾವುದೇ ಬದಲಾವಣೆಯಿಲ್ಲದೆ ಅಂತಿಮಗೊಳಿಸಲೇಬೇಕು ಎಂದು ಕಟ್ಟುನಿಟ್ಟಿನ ಒತ್ತಡ ಹೇರಿ ಅವರು ರಾಜಧಾನಿಗೆ ಮರಳಿದ್ದಾರೆ.
ಹಿರಿಯರಿಗಷ್ಟೇ ಮಣೆ, ಯತೀಂದ್ರ ಔಟ್?
ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ನೀಡಿರುವ ಪಟ್ಟಿಯಲ್ಲಿ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಇಲ್ಲ ಎನ್ನಲಾಗಿದ್ದು, ಉಳಿದ ಬಹುತೇಕ ಹೆಸರುಗಳು ಈ ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಇಲಾಖೆಗಳನ್ನು ನಿಭಾಯಿಸಿದ್ದ ಹಿರಿಯ ನಾಯಕರದ್ದೇ ಆಗಿದೆ.
ಪಟ್ಟಿಯಿಂದ ಕೈಬಿಡುವ ಭೀತಿ: ತಡರಾತ್ರಿವರೆಗೂ ಆಕಾಂಕ್ಷಿಗಳ ದೆಹಲಿ ಲಾಬಿ
ನಿನ್ನೆ ಸಂಜೆಯವರೆಗಿನ ಲೆಕ್ಕಾಚಾರದ ಪ್ರಕಾರ ಕೇವಲ 9 ರಿಂದ 10 ಮಂದಿಗೆ ಮಾತ್ರ ಮೊದಲ ಹಂತದಲ್ಲಿ ಅವಕಾಶ ನೀಡಲು ಹೈಕಮಾಂಡ್ ಸಿದ್ಧತೆ ನಡೆಸಿತ್ತು. ಈ ಸುಳಿವು ಸಿಗುತ್ತಿದ್ದಂತೆ ಆತಂಕಗೊಂಡ ಹಿರಿಯ ನಾಯಕರು, ತಾವು ಮೊದಲ ಪಟ್ಟಿಯಿಂದಲೇ ಕೈಬಿಡಲ್ಪಡಬಹುದು ಎಂಬ ಭೀತಿಯಲ್ಲಿ ತೀವ್ರ ಕಸರತ್ತು ಆರಂಭಿಸಿದ್ದಾರೆ.
ತಾವು ಮೊದಲ ಬ್ಯಾಚ್‌ನಲ್ಲೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಹಿರಿಯರು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ನಿವಾಸಗಳಿಗೆ ದೌಡಾಯಿಸಿ ತಡರಾತ್ರಿಯವರೆಗೂ ಭಾರಿ ಒತ್ತಡ ಹೇರಿದ್ದಾರೆ. ಇತ್ತ ಬೆಂಗಳೂರಿಗೆ ವಾಪಸಾಗಿರುವ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಹ ಹೈಕಮಾಂಡ್ ನಾಯಕರ ಜೊತೆ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದು ಗೊಂದಲ ಬಗೆಹರಿಸಲು ಯತ್ನಿಸುತ್ತಿದ್ದಾರೆ.
ಹೈಕಮಾಂಡ್ ಮುಂದಿರುವ ಯಕ್ಷಪ್ರಶ್ನೆ:
ಹೊಸಬರು vs ಹಿರಿಯರು: ಕೇವಲ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದ ಹಿರಿಯ ನಾಯಕರಿಗೇ ಮಣೆ ಹಾಕಿದರೆ, ಹೊಸ ಮುಖಗಳಿಗೆ ಮತ್ತು ಯುವ ಶಾಸಕರಿಗೆ ಯಾವಾಗ ಅವಕಾಶ ನೀಡಬೇಕು ಎಂಬ ಪ್ರಶ್ನೆ ಹೈಕಮಾಂಡ್ ಅನ್ನು ಕಾಡುತ್ತಿದೆ.
ಪ್ರಾದೇಶಿಕ ಮತ್ತು ಜಾತಿ ಸಮೀಕರಣ: ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಸಮುದಾಯ ಹಾಗೂ ಪ್ರಾಂತ್ಯಗಳಿಗೆ ಮೊದಲ ಪಟ್ಟಿಯಲ್ಲೇ ಸಮಾನ ಪ್ರಾತಿನಿಧ್ಯ ಕಲ್ಪಿಸುವುದು ಸವಾಲಾಗಿದೆ.
ಈ ಎಲ್ಲಾ ರಾಜಕೀಯ ಹಗ್ಗಜಗ್ಗಾಟಗಳ ನಡುವೆ, ಬಹುತೇಕ ಇಂದು ಮಧ್ಯಾಹ್ನದ ವೇಳೆಗೆ ಯಾರಿಗೆಲ್ಲಾ ಸಚಿವ ಭಾಗ್ಯ ಸಿಗಲಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಸದ್ಯದ ಅತ್ಯಂತ ನಂಬಿಕಸ್ಥ ಮೂಲಗಳ ಮಾಹಿತಿಯ ಪ್ರಕಾರ, ಹಿರಿಯರ ಒತ್ತಡಕ್ಕೆ ಮಣಿದಿರುವ ಹೈಕಮಾಂಡ್ ಅಂತಿಮವಾಗಿ 14 ರಿಂದ 15 ಮಂದಿಗೆ ಇಂದು ಪ್ರಮಾಣವಚನ ಸ್ವೀಕರಿಸಲು ಹಸಿರು ನಿಶಾನೆ ತೋರುವ ಸಾಧ್ಯತೆಗಳು ದಟ್ಟವಾಗಿವೆ.




Leave a Reply