ಡಿಕೆಶಿ ಪದಗ್ರಹಣಕ್ಕೂ ಮುನ್ನವೇ ಸಿದ್ದರಾಮಯ್ಯಗೆ ಹೈಕಮಾಂಡ್ Gift: ಕಾಂಗ್ರೆಸ್ ಪರಮೋಚ್ಚ ಸಮಿತಿಗೆ ನೇಮಕ!

ಹಂಚಿಕೊಳ್ಳಿ

ನವದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವ ಕೆಲವೇ ಗಂಟೆಗಳ ಮುನ್ನ, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಮತ್ತು ಪ್ರಭಾವಿ ಹುದ್ದೆಯನ್ನು ನೀಡಿ ಗೌರವಿಸಿದೆ. ಪಕ್ಷದ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ಪರಮೋಚ್ಚ ಸಮಿತಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC – Congress Working Committee) ಸದಸ್ಯರನ್ನಾಗಿ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

​ಕಳೆದ ಮೇ 28ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವ ಮೂಲಕ ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಅತ್ಯಂತ ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ತಡರಾತ್ರಿ ಈ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ.

ಪರಮೋಚ್ಚ ಸಮಿತಿಗೆ ಸಿದ್ದರಾಮಯ್ಯ ಭರ್ಜರಿ ರೀ-ಎಂಟ್ರಿ!

​ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದಂತೆ ಅವರಿಗೆ ಎಐಸಿಸಿ ಮಟ್ಟದಲ್ಲಿ ಪ್ರಮುಖ ಹುದ್ದೆ ನೀಡಲಾಗುತ್ತದೆ ಎಂಬ ಚರ್ಚೆಗಳು ದೆಹಲಿ ವಲಯದಲ್ಲಿ ದಟ್ಟವಾಗಿದ್ದವು. ಅದಕ್ಕೆ ಪೂರಕವೆಂಬಂತೆ, ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನವೇ ಹೈಕಮಾಂಡ್ ಈ ಆದೇಶ ಹೊರಡಿಸುವ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಹಿರಿತನ ಹಾಗೂ ತೂಕಕ್ಕೆ ತಕ್ಕ ಗೌರವವನ್ನು ಕಾಯ್ದುಕೊಂಡಿದೆ.

ಇದು ಸಿದ್ದರಾಮಯ್ಯ ಅವರಿಗೆ ಎರಡನೇ ಇನಿಂಗ್ಸ್:

ಈ ಹಿಂದೆ 2018ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ಕಾರ್ಯಕಾರಿ ಸಮಿತಿಯನ್ನು ಪುನರ್ರಚಿಸಿದಾಗ ಸಿದ್ದರಾಮಯ್ಯ ಅವರನ್ನು ಸಿಡಬ್ಲ್ಯೂಸಿ (CWC) ಸದಸ್ಯರನ್ನಾಗಿ ಸೇರಿಸಲಾಗಿತ್ತು. ಆದರೆ, 2019ರಲ್ಲಿ ಅವರನ್ನು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ (LoP) ನೇಮಕ ಮಾಡಿದ ಸಂದರ್ಭದಲ್ಲಿ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ನಿಯಮದ ಅಡಿಯಲ್ಲಿ ಸಿಡಬ್ಲ್ಯೂಸಿ ಸ್ಥಾನದಿಂದ ಕೈಬಿಡಲಾಗಿತ್ತು. ಇದೀಗ 7 ವರ್ಷಗಳ ಬಳಿಕ ಸಿದ್ದರಾಮಯ್ಯ ಅವರು ಮತ್ತೆ ಕಾಂಗ್ರೆಸ್‌ನ ಪರಮೋಚ್ಚ ಸಮಿತಿಗೆ ಅದ್ಧೂರಿಯಾಗಿ ಮರಳಿದ್ದಾರೆ.

ದೆಹಲಿ ಮಟ್ಟದಲ್ಲಿ ಹೆಚ್ಚಿದ ಸಿದ್ದು ಪವರ್

​ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ಪಕ್ಷದ ನೀತಿ-ನಿಯಮಗಳು, ರಾಷ್ಟ್ರೀಯ ರಾಜಕೀಯ ನಿಲುವುಗಳು ಹಾಗೂ ಪ್ರಮುಖ ಆಡಳಿತಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಸುಪ್ರೀಂ ಬಾಡಿಯಾಗಿದೆ. ಸಿದ್ದರಾಮಯ್ಯ ಅವರನ್ನು ಈ ಸಮಿತಿಗೆ ಸೇರ್ಪಡೆಗೊಳಿಸಿರುವುದರಿಂದ ಮುಂಬರುವ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲೂ ಅವರ ಸಲಹೆ ಮತ್ತು ನಿರ್ಧಾರಗಳು ಅತ್ಯಂತ ಮಹತ್ವದ ಪಾತ್ರ ವಹಿಸಲಿವೆ. ಅಲ್ಲದೆ, ಕರ್ನಾಟಕ ಸರ್ಕಾರದ ಸಚಿವ ಸಂಪುಟ ರಚನೆ ಹಾಗೂ ಮುಂಬರುವ ಹಂಚಿಕೆಗಳ ಪ್ರಕ್ರಿಯೆಯಲ್ಲೂ ಸಿದ್ದರಾಮಯ್ಯ ಅವರ ಕೈ ಮೇಲಾಗುವ ಸಾಧ್ಯತೆಗಳನ್ನು ಈ ನೇಮಕಾತಿ ದೃಢಪಡಿಸಿದೆ.

Leave a Reply

Your email address will not be published. Required fields are marked *

Advertisement


This will close in 3 seconds