
ಶಿರಸಿ: ತಾಲೂಕಿನ ಗೋಳಿಕಟ್ಟಾದ ಕಾಮಧೇನು ಸಹಕಾರಿ ಹಾಲು ಮತ್ತು ಹಣ್ಣು ಸಂಸ್ಕರಣಾ ಸೊಸೈಟಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹೊರಡಿಸಿದ್ದ ಆದೇಶವನ್ನು ಧಾರವಾಡ ಹೈಕೋರ್ಟ್ ಎತ್ತಿಹಿಡಿದಿದೆ. ಸೊಸೈಟಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯವು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಿ, ಜಮೀನನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆಗೆ ಅವಕಾಶ ನೀಡಿದೆ.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದ್ದು, ಗುತ್ತಿಗೆ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಮುಂದುವರಿಯಲು ಸೊಸೈಟಿಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಸರ್ಕಾರವು 1969ರ ಡಿಸೆಂಬರ್ 2ರಂದು 20 ವರ್ಷಗಳ ಅವಧಿಗೆ ಜಮೀನನ್ನು ಕಾಮಧೇನು ಸೊಸೈಟಿಗೆ ಗುತ್ತಿಗೆ ಆಧಾರದ ಮೇಲೆ ನೀಡಿತ್ತು. ಈ ಗುತ್ತಿಗೆ ಅವಧಿಯು 1989ರಲ್ಲೇ ಮುಕ್ತಾಯಗೊಂಡಿತ್ತು. ಬಳಿಕ ಅರಣ್ಯ ಇಲಾಖೆ ಜಮೀನನ್ನು ಹಿಂಪಡೆಯಲು ಮುಂದಾದಾಗ ಸೊಸೈಟಿಯು 1993ರಲ್ಲಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಕರಣದಲ್ಲಿ ಸಿವಿಲ್ ನ್ಯಾಯಾಲಯವು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ಸೊಸೈಟಿಯನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು ಎಂದು ಮಧ್ಯಂತರ ರಕ್ಷಣೆ ನೀಡಿತ್ತು. ನಂತರ ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್ 64-ಎ ಅಡಿಯಲ್ಲಿ ಅರಣ್ಯ ಇಲಾಖೆ ಸೊಸೈಟಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ನಡೆಸಿ, ಆಕ್ಷೇಪಣೆಗಳನ್ನು ಆಲಿಸಿತು. ಬಳಿಕ 2026ರ ಫೆ. 21ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಮೀನು ತೆರವುಗೊಳಿಸಲು ಆದೇಶಿಸಿದ್ದರು.
ಈ ಆದೇಶವನ್ನು ಸೊಸೈಟಿ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದು, ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜೂ. 9, 2026ರಂದು ಎಸಿಎಫ್ ಆದೇಶವನ್ನು ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ಸೊಸೈಟಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಸಿವಿಲ್ ನ್ಯಾಯಾಲಯದ ಹಿಂದಿನ ಆದೇಶದಲ್ಲಿ ಸೂಚಿಸಿದ್ದಂತೆ ಅರಣ್ಯ ಇಲಾಖೆಯು ನೋಟಿಸ್ ನೀಡಿ, ಸೊಸೈಟಿಯ ವಾದ ಹಾಗೂ ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕವೇ ತೆರವು ಆದೇಶ ಹೊರಡಿಸಿದೆ. ಹೀಗಾಗಿ ಕಾನೂನುಬದ್ಧ ಪ್ರಕ್ರಿಯೆ ಪಾಲನೆಯಾಗಿಲ್ಲ ಎಂಬ ಸೊಸೈಟಿಯ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ. ಗುತ್ತಿಗೆ ಅವಧಿ 1989ರಲ್ಲೇ ಮುಕ್ತಾಯಗೊಂಡಿದ್ದು, ಅದರ ನವೀಕರಣಕ್ಕೆ ಮಾಡಿದ್ದ ಮನವಿಯೂ ತಿರಸ್ಕೃತಗೊಂಡು ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಮುಂದುವರಿಯಲು ಸೊಸೈಟಿಗೆ ಯಾವುದೇ ಸ್ವತಂತ್ರ ಹಕ್ಕಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಜಮೀನು ಡಿ-ನೋಟಿಫೈ ಅಥವಾ ಡಿ-ಫಾರೆಸ್ಟ್ ಆಗಿದ್ದು, ಅರಣ್ಯ ಇಲಾಖೆಗೆ ಈ ವಿಚಾರದಲ್ಲಿ ಅಧಿಕಾರವಿಲ್ಲ ಎಂಬ ಸೊಸೈಟಿಯ ವಾದವನ್ನೂ ನ್ಯಾಯಾಲಯ ಒಪ್ಪಲಿಲ್ಲ. ಯಾವ ಇಲಾಖೆಯಿಂದ ಸೊಸೈಟಿಗೆ ಜಮೀನು ಗುತ್ತಿಗೆ ನೀಡಲಾಗಿತ್ತೋ, ಗುತ್ತಿಗೆ ಅವಧಿ ಮುಕ್ತಾಯಗೊಂಡ ಬಳಿಕ ಅದನ್ನು ಹಿಂಪಡೆಯುವ ಅಧಿಕಾರವೂ ಅದೇ ಇಲಾಖೆಗೆ ಇದೆ. ದೀರ್ಘಕಾಲದಿಂದ ಜಮೀನನ್ನು ಸ್ವಾಧೀನದಲ್ಲಿಟ್ಟುಕೊಂಡಿದ್ದೇವೆ ಎಂಬ ಆಧಾರದ ಮೇಲೆ ಜಮೀನಿನ ಮೇಲೆ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ಕಾಮಧೇನು ಸಹಕಾರಿ ಹಾಲು ಮತ್ತು ಹಣ್ಣು ಸಂಸ್ಕರಣಾ ಸೊಸೈಟಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಸಿವಿಲ್ ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿ ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಜಮೀನನ್ನು ವಶಕ್ಕೆ ಪಡೆಯಲು ಯಾವುದೇ ಅಡ್ಡಿಯಿಲ್ಲ ಎಂದು ಆದೇಶಿಸಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಎ.ಪಿ. ಹೆಗಡೆ ಜಾನ್ಮನೆ ಹಾಗೂ ವಿಜಯ್ ಮಲಾಲಿ ವಾದ ಮಂಡಿಸಿದರೆ, ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಂಗಾಧರ್ ಜಿ.ಎಂ. ಹಾಗೂ ಎಜಿಎ ಶರತ್ ವಿ. ಮಗದುಮ್ ಹಾಜರಾಗಿದ್ದರು.















Leave a Reply