ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ: ಮಾಲೀಕನಿಗೆ ₹25 ಸಾವಿರ ದಂಡ, ನ್ಯಾಯಾಂಗ ಬಂಧನ ವಿಧಿಸಿದ ಯಲ್ಲಾಪುರ ನ್ಯಾಯಾಲಯ

ಹಂಚಿಕೊಳ್ಳಿ

ಯಲ್ಲಾಪುರ: ಅಪ್ರಾಪ್ತ ವಯಸ್ಕರಿಗೆ ಕಾನೂನು ಬಾಹಿರವಾಗಿ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟ ಗಂಭೀರ ಅಪರಾಧಕ್ಕಾಗಿ, ಇಲ್ಲಿನ ಜೆ.ಎಂ.ಎಫ್.ಸಿ (JMFC) ನ್ಯಾಯಾಲಯವು ಆರೋಪಿಗೆ ಭಾರಿ ದಂಡ ಹಾಗೂ ವಿನೂತನ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:
ಕಿರವತ್ತಿಯ ದಾಂಡೇಲಿವಾಡ ನಿವಾಸಿಯಾದ ಸೋನು  ಸತ್ತು ಬಿಚುಕುಳೆ) ಎಂಬುವರು ಅಪ್ರಾಪ್ತ ಬಾಲಕನಿಗೆ ಮೋಟಾರ್ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದನು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ (Cr No) 23/26 ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ವಿಚಾರಣೆ ನಡೆಸಿದ  ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಅನಿತಾಕುಮಾರಿ ಎಸ್. ರವರು ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಆದೇಶ ಪ್ರಕಟಿಸಿದ್ದಾರೆ. ಮೋಟಾರ್ ವಾಹನ ಕಾಯ್ದೆ (MV Act) ಕಲಂ 199(A) ಅಡಿಯಲ್ಲಿ ಆರೋಪಿಗೆ ₹25,000 (ಇಪ್ಪತ್ತೈದು ಸಾವಿರ ರೂ.) ಭಾರಿ ದಂಡ ವಿಧಿಸಲಾಗಿದೆ.

ಅಲ್ಲದೆ, ಕೇವಲ ದಂಡ ಮಾತ್ರವಲ್ಲದೆ ಕಾನೂನು ಉಲ್ಲಂಘನೆಯ ಗಂಭೀರತೆಯನ್ನು ಮನಗಾಣಿಸುವ ನಿಟ್ಟಿನಲ್ಲಿ ಆರೋಪಿಗೆ ತೀರ್ಪು ಪ್ರಕಟವಾದ ದಿನದ ಸಂಜೆ 5 ಗಂಟೆಯವರೆಗೆ ನ್ಯಾಯಾಂಗ ಬಂಧನದಲ್ಲಿ ಇರುವಂತೆ ವಿಶಿಷ್ಟ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಅಪ್ರಾಪ್ತ ವಯಸ್ಕರ ಕೈಗೆ ವಾಹನ ನೀಡುವುದು ಕಾನೂನುಬಾಹಿರ ಮಾತ್ರವಲ್ಲದೆ ಸಾರ್ವಜನಿಕರ ಜೀವಕ್ಕೂ ಅಪಾಯಕಾರಿ ಎಂಬ ಸಂದೇಶವನ್ನು ಈ ತೀರ್ಪು ಸಾರಿದೆ. ಹೆತ್ತವರು ಮತ್ತು ವಾಹನ ಮಾಲೀಕರು ತಮ್ಮ ಮಕ್ಕಳಿಗೆ ಹಾಗೂ ಅಪ್ರಾಪ್ತರಿಗೆ ವಾಹನ ನೀಡುವ ಮುನ್ನ ಎಚ್ಚರ ವಹಿಸಬೇಕೆಂದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

Leave a Reply

Your email address will not be published. Required fields are marked *