ಶಾಸಕ ಶಿವರಾಮ ಹೆಬ್ಬಾರ್ ಸತತ ಪ್ರಯತ್ನ: ಯಲ್ಲಾಪುರ, ಮುಂಡಗೋಡ ‘ಬರಗಾಲ ಪೀಡಿತ ಪ್ರದೇಶ’ ಎಂದು ಘೋಷಣೆ

ಹಂಚಿಕೊಳ್ಳಿ

ಯಲ್ಲಾಪುರ, ಆಗಸ್ಟ್ 14: ಮಳೆಯ ತೀವ್ರ ಅಭಾವದಿಂದ ಕಂಗಾಲಾಗಿದ್ದ ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ರೈತರಿಗೆ ಕೊನೆಗೂ  ಭರವಸೆಯೊಂದು ದೊರಕಿದೆ. ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಅವರ ಸತತ ಮತ್ತು ವಿಶೇಷ ಪ್ರಯತ್ನದ ಫಲವಾಗಿ, ರಾಜ್ಯ ಸರ್ಕಾರವು ಈ ಎರಡೂ ತಾಲೂಕುಗಳನ್ನು ‘ಬರಗಾಲ ಪೀಡಿತ ಪ್ರದೇಶ’ಗಳೆಂದು ಅಧಿಕೃತವಾಗಿ ಘೋಷಿಸಿ ಆದೇಶ ಹೊರಡಿಸಿದೆ.

ಚಾಲ್ತಿ ವರ್ಷದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಯಲ್ಲಾಪುರ ಮತ್ತು ಮುಂಡಗೋಡ ತಾಲೂಕಿನ ರೈತರು ತೀವ್ರ ಬೆಳೆ ನಷ್ಟ ಅನುಭವಿಸುತ್ತಿದ್ದು, ಆರ್ಥಿಕವಾಗಿ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಸ್ಥಳೀಯ ಕೃಷಿಕರ ಈ ಗಂಭೀರ ಸಮಸ್ಯೆಯನ್ನು ಮನಗಂಡ ಶಾಸಕ ಶಿವರಾಮ ಹೆಬ್ಬಾರ್ ಅವರು ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿ, ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಗಮನಕ್ಕೆ ತಂದಿದ್ದರು. ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕು ಎಂದು ವಿಶೇಷ ಒತ್ತಡ ಹೇರಿದ ಪರಿಣಾಮವಾಗಿ ರಾಜ್ಯ ಸರ್ಕಾರವು ಇಂದು ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಈ ಅಧಿಕೃತ ಘೋಷಣೆಯಿಂದಾಗಿ ಮಳೆಯಿಲ್ಲದೆ ಕೃಷಿ ನಷ್ಟ ಅನುಭವಿಸುತ್ತಿರುವ ಉಭಯ ತಾಲೂಕುಗಳ ರೈತರಿಗೆ ಸರ್ಕಾರದ ವಿವಿಧ ಪರಿಹಾರ ಧನ, ಇನ್‌ಪುಟ್ ಸಬ್ಸಿಡಿ ಹಾಗೂ ನೆರವು ಯೋಜನೆಗಳು ಸುಲಭವಾಗಿ ತಲುಪಲು ಹಾದಿ ಸುಗಮವಾಗಿದೆ.

ರೈತರ ಬೆನ್ನಿಗೆ ನಿಂತು ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲು ಸಹಕರಿಸಿದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವರು, ಡಾ. ಜಿ. ಪರಮೇಶ್ವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರಿಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಮತ್ತು ಕ್ಷೇತ್ರದ ಜನತೆಯ ಪರವಾಗಿ ಪ್ರಕಟಣೆಯ ಮೂಲಕ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *