ತೀವ್ರ ವಿರೋಧದ ನಡುವೆಯೂ ಕೇಂದ್ರದ ‘VB G Ram G’ ಯೋಜನೆ ಜಾರಿಗೆ ಅನಿವಾರ್ಯವಾಗಿ ಒಪ್ಪಿದ ರಾಜ್ಯ ಸರ್ಕಾರ!

ಹಂಚಿಕೊಳ್ಳಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ವಿಬಿ ಜಿ ರಾಮ್‌ ಜಿ’ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಜ್ಯ ಸರ್ಕಾರವು ಇದೀಗ ಅನಿವಾರ್ಯವಾಗಿ ಆ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಹೊಸ ಯೋಜನೆಯಿಂದ ಬಡವರ ಬದುಕಿನ ಹಕ್ಕು ಕಸಿದುಕೊಂಡಂತಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಸರ್ಕಾರ, ಈ ಹಿಂದೆ ವಿಧಾನಸಭೆಯಲ್ಲಿ ಇದರ ವಿರುದ್ಧ ನಿರ್ಣಯ ಕೈಗೊಂಡು ಕಾನೂನು ಹೋರಾಟ ನಡೆಸುವುದಾಗಿಯೂ ಗುಡುಗಿತ್ತು. ಆದರೆ, ಮಂಗಳವಾರ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಎಲ್ಲಾ ರಾಜ್ಯಗಳ ಸಚಿವರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ರಾಜ್ಯದ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಿದೆ.

ಈ ವರ್ಷದ ಜುಲೈ ಒಂದನೇ ತಾರೀಖಿನಿಂದ ದೇಶಾದ್ಯಂತ ಹೊಸ ಯೋಜನೆ ಜಾರಿಯಾಗಬೇಕಿದ್ದು, ‘ವಿಬಿ ಜಿರಾಮ್‌ ಜಿ’ ಅಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು 60:40ರ ಅನುಪಾತದಲ್ಲಿ ಐದು ಸಾವಿರದ ಏಳುನೂರ ಒಂಬತ್ತು ಕೋಟಿ ರೂಪಾಯಿಗಳ (5709.90 ಕೋಟಿ ರೂ.) ಮಧ್ಯಂತರ ಅನುದಾನವನ್ನು ಹಂಚಿಕೆ ಮಾಡಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಶೇಕಡಾ 40 ಅನುಪಾತದಲ್ಲಿ 3806.60  ಕೋಟಿ ರೂಪಾಯಿಗಳ ತನ್ನ ಪಾಲನ್ನು ನೀಡಬೇಕಾಗಿದೆ. ಈ ಬೃಹತ್ ಮೊತ್ತದ ಆರ್ಥಿಕ ಹೊಂದಾಣಿಕೆಗಾಗಿ, ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಹೊಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆಯುವುದಾಗಿ ನೂತನ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ಬಿಸಿಯನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಲು ತೀರ್ಮಾನಿಸಿದ್ದು, ಅದರಂತೆ ಕೇಂದ್ರವು ಕೂಡ ‘ವಿಬಿ ಜಿ ರಾಮ್‌ ಜಿ’ ಯೋಜನೆಯಡಿ ಕೂಲಿ ಕಾರ್ಮಿಕರ ಕನಿಷ್ಠ ವೇತನವನ್ನು ಹಾಗೂ ಯೋಜನೆಯ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ. 

ಈ ಮೊದಲು ಮನರೇಗಾ ರದ್ದುಪಡಿಸಿ ಹೊಸ ಯೋಜನೆ ಘೋಷಿಸಿದಾಗ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಮನರೇಗಾ ಯೋಜನೆಯಲ್ಲಿನ ಹಣ ದುರ್ಬಳಕೆ, ನಕಲಿ ಬಿಲ್ ಸೃಷ್ಟಿ ಹಾಗೂ ಕಾರ್ಮಿಕರ ಬದಲಿಗೆ ಯಂತ್ರಗಳ ಬಳಕೆಯಂತಹ ಭಾರಿ ಅವ್ಯವಹಾರಗಳನ್ನು ತಡೆಯುವ ಸದುದ್ದೇಶದಿಂದಲೇ ಯೋಜನೆಗೆ ಹೊಸ ರೂಪ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದರು. 

ಇದೀಗ ಜೂನ್ 28 ಮತ್ತು 29ರಂದು ನವದೆಹಲಿಯಲ್ಲಿ ನಡೆಯಲಿರುವ ಗ್ರಾಮೀಣಾಭಿವೃದ್ಧಿ ಸಚಿವರ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಖುದ್ದಾಗಿ ಭಾಗವಹಿಸಿ, ರಾಜ್ಯದ ಪರವಾದ ಬೇಡಿಕೆಗಳನ್ನು ಪ್ರಬಲವಾಗಿ ಮಂಡಿಸುವುದಾಗಿ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds