ಸಂಪೂರ್ಣ ವಾಸ್ತು ಪ್ರಕಾರವೇ ಸಿದ್ಧವಾಯ್ತು ಲೋಕಭವನದ ಗ್ಲಾಸ್ ಹೌಸ್: ಸಂಜೆ 4:05ರ ಶುಭ ಮುಹೂರ್ತದಲ್ಲಿ ಡಿಕೆಶಿ ಪ್ರಮಾಣವಚನ

ಹಂಚಿಕೊಳ್ಳಿ

ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಇಂದು ಹೊಸ ಯುಗ ಆರಂಭವಾಗುತ್ತಿದ್ದು, ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಸಾಂಪ್ರದಾಯಿಕ ರೇಷ್ಮೆ ಪಂಚೆ ಮತ್ತು ಶಲ್ಯ ಧರಿಸಿ ಡಿಕೆಶಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ನೂತನ ಸಾರಥಿಯ ಪದಗ್ರಹಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ವಿಶೇಷವೆಂದರೆ, ತಮ್ಮ ಪದಗ್ರಹಣದ ವೇದಿಕೆಯಿಂದ ಹಿಡಿದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯವರೆಗೂ ಎಲ್ಲವನ್ನೂ ಡಿಕೆಶಿ ಅವರು ವಾಸ್ತು ಪ್ರಕಾರವೇ ಬದಲಾವಣೆ ಮಾಡಿಸಿದ್ದಾರೆ.

ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ (ಗಾಜಿನ ಮನೆ) ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಜ್ಯೋತಿಷಿಗಳ ಸಲಹೆ ಮತ್ತು ವಾಸ್ತು ನಿಯಮಗಳ ಪ್ರಕಾರ, ಈ ಹಿಂದೆ ಪಶ್ಚಿಮ ದಿಕ್ಕಿಗೆ ಮುಖ ಮಾಡುತ್ತಿದ್ದ ವೇದಿಕೆಯ ದಿಕ್ಕನ್ನು ಬದಲಾಯಿಸಲಾಗಿದೆ. ಈ ಬಾರಿ ಪೂರ್ವಾಭಿಮುಖವಾಗಿ (East Facing) ಹೊಸ ವೇದಿಕೆಯನ್ನು ನಿರ್ಮಿಸಿರುವುದು ವಿಶೇಷ.

ಸಂಪೂರ್ಣ ಶುಭ ಮುಹೂರ್ತದಲ್ಲೇ ಅಧಿಕಾರ ಸ್ವೀಕರಿಸಲು ನಿರ್ಧರಿಸಲಾಗಿದ್ದು, ಇಂದು ಸಂಜೆ 4:05 ರಿಂದ 4:20 ರ ಒಳಗೆ ಡಿಕೆಶಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸರ್ವಧರ್ಮದ ಗುರುಗಳು ಮತ್ತು ವಿವಿಧ ಪ್ರಮುಖ ಮಠಗಳ ಮಠಾಧೀಶರು ಸಮ್ಮುಖ ವಹಿಸಲಿದ್ದಾರೆ.

ಸಿಎಂ ಆಫೀಸ್‌ನಲ್ಲೂ ‘ವಾಸ್ತು’ ಕಣ್ಣು; ಸಚಿವರ ಸಂಖ್ಯೆಗೂ ಪಟ್ಟು!

ಕೇವಲ ವೇದಿಕೆ ಮಾತ್ರವಲ್ಲದೆ, ವಿಧಾನಸೌಧದ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಮತ್ತು ನಿವಾಸದಲ್ಲೂ ಇದ್ದ ವಾಸ್ತು ದೋಷಗಳನ್ನು ಪರಿಶೀಲಿಸಲು ವಾಸ್ತು ತಜ್ಞರು ಹಾಗೂ ಜ್ಯೋತಿಷಿಗಳು ಭೇಟಿ ನೀಡಿದ್ದರು. ಅವರ ಸೂಚನೆಯ ಮೇರೆಗೆ ಕಚೇರಿಯ ಒಳಾಂಗಣದಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ, ವಾಸ್ತು ಸಂಖ್ಯೆಗಳ ನಂಬಿಕೆಯ ಹಿನ್ನೆಲೆಯಲ್ಲಿ ಸಂಪುಟದ ಮೊದಲ ಪಟ್ಟಿಯಲ್ಲಿ ಕೇವಲ ಒಂಬತ್ತು (9) ಮಂದಿ ಸಚಿವರ ಹೆಸರನ್ನಷ್ಟೇ ಪ್ರಕಟಿಸುವಂತೆ ಡಿಕೆಶಿ ಅವರು ಹೈಕಮಾಂಡ್ ನಾಯಕರ ಬಳಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ರಾಜಧಾನಿಗೆ ಹರಿದುಬಂದ ದೇಶದ ವಿವಿಐಪಿಗಳ ದಂಡು:

ರಾಜ್ಯದಲ್ಲೇ ಮೊದಲ ಬಾರಿಗೆ ಸರ್ವಧರ್ಮಗಳ ಸ್ವಾಮೀಜಿಗಳ ಪವಿತ್ರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ರಾಷ್ಟ್ರ ಮಟ್ಟದ ನಾಯಕರ ದಂಡೇ ಬೆಂಗಳೂರಿಗೆ ಆಗಮಿಸುತ್ತಿದೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇವರೊಂದಿಗೆ ಚಿತ್ರರಂಗದ ಸ್ಟಾರ್ ನಟರು ಹಾಗೂ ವಿವಿಧ ರಂಗಗಳ ಗಣ್ಯರು ಬಿಗ್ ಇವೆಂಟ್‌ಗೆ ಸಾಕ್ಷಿಯಾಗಲಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds